
ಚಾಮರಾಜನಗರ: ಓದಿರೋದು ಒಂದು ಕೊಡುತ್ತಿದ್ದ ಚಿಕಿತ್ಸೆ ಮತ್ತೊಂದು. ಹೀಗೇ ಮಾಡಿ ಜನರ ಜೀವದೊಟ್ಟಿಗೆ ಚೆಲ್ಲಾಟ ಆಡುತ್ತಿದ್ದ ನಕಲಿ ಅಲೋಪತಿ ವೈದ್ಯರಿಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿ ಕ್ಲಿನಿಕ್ ಗಳನ್ನು ಬಂದ್ ಮಾಡಿಸಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ.
ಹನೂರು ತಾಲೂಕಿನ ನಕಲಿ ಕ್ಲಿನಿಕ್ ಗಳ ಮೇಲೆ ಡಿಎಚ್ಒ ಡಾ.ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೌದಳ್ಳಿ ಗ್ರಾಮದಲ್ಲಿ ಇರುವ ಆದಮ್ ಕ್ಲಿನಿಕ್, ಜನತಾ ಕ್ಲಿನಿಕ್ ಹಾಗೂ ದೀಪಾ ಕ್ಲಿನಿಕ್ ಗಳಿಗೆ ನೋಟಿಸ್ ಜಾರಿ ಮಾಡಿ ನಕಲಿ ಕ್ಲಿನಿಕ್ ಗಳನ್ನು ಬಂದ್ ಮಾಡಿಸಿದ್ದಾರೆ.
ಹನೂರು ತಾಲೂಕಿನ ವಿವಿಧಡೆ ನಕಲಿ ಕ್ಲಿನಿಕ್ ಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಅಜ್ಜೀಪುರ, ರಾಮಾಪುರ, ಕೂಡ್ಲೂರು ಮತ್ತು ಹೂಗ್ಯಂ ಇನ್ನಿತರ ಕಡೆಗಳಲ್ಲಿ ಇರುವ ಕ್ಲಿನಿಕ್ ಗಳಿಗೆ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪರಿಶೀಲನೆ ವೇಳೆ ಲೈಸೆನ್ಸ್ ಒಬ್ಬರದ್ದಾದರೇ ಚಿಕಿತ್ಸೆ ಕೊಡುವವರು ಮತ್ತೊಬ್ಬರು, ಆಯುಷ್ ವೈದ್ಯರು ಅಲೋಪತಿ ಚಿಕಿತ್ಸೆ ಕೊಡುತ್ತಿರುವುದು ಬೆಳಕಿಗೆ ಬಂದಿದೆ.