
ದೊಡ್ಡಬಳ್ಳಾಪುರ: ಬೊಗಳಿದ್ದಕ್ಕೆ ನಾಯಿಯನ್ನು (Barking Dog) ಗುಂಡಿಕ್ಕಿ ಕೊಂದಿರುವ ಪ್ರಕರಣ ತಾಲೂಕಿನ ಮಾದಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ 5 ವರ್ಷದಿಂದ ಪ್ರೀತಿಯಿಂದ ಸಾಕಿದ ರಾಕಿ ಎಂಬ ನಾಯಿಯನ್ನು ಗ್ರಾಮದ ಕೃಷ್ಣಪ್ಪ ಎಂಬುವರು ನಾಡ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಮಾಲೀಕ ಹರೀಶ್ ತಿಳಿಸಿದ್ದಾರೆ.
ತಾಲೂಕು ಪಶು ಆಸ್ಪತ್ರೆಯಲ್ಲಿ ನಾಯಿಯ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ನಾಯಿಯ ದೇಹದಲ್ಲಿ 7 ರಿಂದ 8 ಗುಂಡೇಟುಗಳಿವೆ.
ರಕ್ತ ಒಳಸ್ರಾವದಿಂದ ನಾಯಿ ಮೃತಪಟ್ಟಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ಸಹಾಯದಿಂದ ಹರೀಶ್ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿಲಾಗಿದ್ದು, ಪ್ರಕರಣ ದಾಖಲಾಗಿದೆ.
ಮಾಲೀಕ ಹರೀಶ್ ಅವರು ತಮ್ಮ ಸಹೋದರಿ ನೀಡಿದ ನಾಯಿ ರಾಕಿಯನ್ನು ಬಹಳ ಮುದ್ದಿನಿಂದ ಸಾಕಿದ್ದರು. ಇವತ್ತಿನವರೆಗೂ ನಾಯಿ ಯಾರಿಗೂ ಕೆಡಕು ಉಂಟು ಮಾಡಿರಲಿಲ್ಲ.
ಗ್ರಾಮದಲ್ಲಿ ಹಂದಿ ಸಾಕಣೆ ಮಾಡುತ್ತಿದ್ದ ಕೃಷ್ಣಪ್ಪ ಸಹ ಏಳೆಂಟು ನಾಯಿ ಸಾಕಿದ್ದಾರೆ. ಆದರೆ ಇಂದು ರಾಕಿ ನಾಯಿ ತನ್ನನ್ನು ನೋಡಿ ಬೊಗಳಿತ್ತೆಂದು ಹಂದಿ ಬೇಟೆಗೆ ಬಳಸುವ ನಾಡಬಂದೂಕಿನಿಂದ ಗುಂಡು ಹಾರಿಸಿದ್ದಾರೆ.
ಕೃಷ್ಣಪ್ಪನ ಬಳಿ ಎರಡು ಮೂರು ಬಂದೂಕುಗಳಿವೆ. ಆದರೆ ಯಾವ ಬಂದೂಕಿಗೂ ಲೈಸೆನ್ಸ್ ಇಲ್ಲ, ನಾಯಿ ಕೊಂದಿದ್ದು ಯಾಕೆ ಎಂದು ಕೇಳಿದ್ದಕ್ಕೆ ಸಾವನ್ನಪ್ಪಿದ್ದು ನಾಯಿಯೇ ಅಲ್ವಾ ಎಂಬ ದರ್ಪದ ಮಾತನಾಡಿರುವುದಾಗಿ ತಿಳಿದು ಬಂದಿದೆ.