
ಬೆಂಗಳೂರು: ‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಕುಮಾರ್ ಒಂದಿಲ್ಲೊಂದು ವಿವಾದಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ‘ಕಾಂತಾರ’ ಸಿನಿಮಾದಲ್ಲಿನ ಭೂತಕೋಲ ಆಚರಣೆ ಬಗ್ಗೆ ಮಾತನಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ.
ಹೀಗಾಗಿ ಚೇತನ್ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು ಆಗುತ್ತಿವೆ.
ದೈವಾರಾಧನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟ ಚೇತನ್ ವಿರುದ್ಧ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹಿಂದೂಗಳ ಭಾವನೆಗೆ ಧಕ್ಕೆ ಹಾಗೂ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಶಿವಕುಮಾರ್ ಎಂಬುವವರು ನಟನ ವಿರುದ್ಧ ದೂರು ದಾಖಲಿಸಿದ್ದಾರೆ.
ಚೇತನ್ ಜಾತಿ-ಜಾತಿ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಚೇತನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ.
ನಟ ಚೇತನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ, ಅದು ಬುಡಕಟ್ಟು ಜನಾಗಂದ ಸಂಸ್ಕೃತಿ.
ಆದರೆ ರಿಷಬ್ ಶೆಟ್ಟಿ ಇದನ್ನು ಹಿಂದೂ ಸಂಸ್ಕೃತಿ ಎಂದು ಹೇಳುತ್ತಿದ್ದಾರೆಂದು ವಿವಾದ ಸೃಷ್ಟಿಸಿದ್ದರು.ಇನ್ನೂ ದೂರು ದಾಖಲಾದ ಹಿನ್ನೆಲೆ ನಟ ಚೇತನ್‌ಗೆ ನೋಟಿಸ್ ನೀಡಿದ್ದು, ಇಂದು ಈ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಾಂತಾರ’ ಬಾಕ್ಸಾ ಆಫೀಸ್ ಧೂಳಿಪಟ ಮಾಡಿದೆ.
ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿರುವ ‘ಕಾಂತಾರ’ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ.
ಈಗಾಗಲೇ 100 ಕೋಟಿ ರೂ. ಕ್ಲಬ್ ಸೇರಿರುವ ಈ ಸಿನಿಮಾವನ್ನು ವಿವಿಧ ಚಿತ್ರರಂಗದ ಸ್ಟಾರ್ ನಟರು ಮೆಚ್ಚಿಕೊಂಡಿದ್ದಾರೆ.