
ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ದೇಶಾದ್ಯಂತ ಹಿಂಸಾಚಾರ, ಪ್ರತಿಭಟನೆ ಭುಗಿಲೆದ್ದಿರುವ ಕಾರಣ ರಾಜ್ಯದಲ್ಲೂ ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆಯಬಹುದೆಂಬ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ.
ವಿಮಾನ ನಿಲ್ದಾಣ, ಬಂದರುಗಳು, ಪ್ರಮುಖ ಚೆಕ್‍ಪೋಸ್ಟ್‍ಗಳು, ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಮೈಸೂರು ಅರಮನೆ, ಗಣ್ಯರ ನಿವಾಸಗಳು, ಪ್ರವಾಸಿತಾಣಗಳು ಸೇರಿದಂತೆ ಮತ್ತಿತರ ಕಡೆ ಕಟ್ಟೆಚ್ಚರ ವಹಿಸಲಾಗಿದೆ.
ಅಲ್‍ಖೈದಾ ಉಗ್ರಗ್ರಾಮಿ ಸಂಘಟನೆಯ ಉಗ್ರರ ಕೈವಾಡವಿರುವುದನ್ನು ಕೇಂದ್ರ ಗುಪ್ತಚರ ಮತ್ತು ಸಂಶೋಧನಾ ಮತ್ತು ವಿಶ್ಲೇಷಣೆ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ಭಾರತದ ಪ್ರಮುಖ ನಗರವಾದ ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ಆತ್ಮಾಹುತಿ ದಾಳಿಯ ಉಗ್ರರು ದುಷ್ಕøತ್ಯ ನಡೆಸಬಹುದು ಎಂಬ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಕಡೆ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ರಮುಖವಾಗಿ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಭಟ್ಕಳ, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.ಬೆಂಗಳೂರಿನ ಇಸ್ಕಾನ್, ಮೈಸೂರು ಅರಮನೆ, ಐಟಿಬಿಟಿ ಕಂಪನಿಗಳು, ಮಾಲ್‍ಗಳು, ಮಾರುಕಟ್ಟೆ, ಜನಸಂದಣಿ ಇರುವ ಪ್ರದೇಶಗಳು ಮತ್ತಿತರ ಕಡೆ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು, ಕಾರವಾರ ಬಂದರುಗಳ ಮೇಲೆ ತೀವ್ರ ನಿಗಾ ಇಡಲಾಗಿದೆ.
ಅನುಮಾನಸ್ಪದವಾಗಿ ತಿರುಗಾಡುವವರ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಅಗತ್ಯ ಕಂಡುಬಂದರೆ ಅಂಥವರನ್ನು ತಕ್ಷಣವೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವಂತೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ. ಕಳೆದ ವಾರ ಬೆಂಗಳೂರಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್‍ನ ಪ್ರಮುಖ ಉಗ್ರನನ್ನು ಬಂಸಲಾಗಿತ್ತು. ಈತ ಬೆಂಗಳೂರಿನಲ್ಲಿ ಉಗ್ರಗಾಮಿ ಸಂಘಟನೆಗೆ ಕೆಲವು ಯುವಕರನ್ನು ಸೇರ್ಪಡೆ ಮಾಡಿಕೊಳ್ಳಲು ತರಬೇತಿ ನೀಡಿದ್ದ ಎನ್ನಲಾಗುತ್ತಿದೆ.
ಹೀಗಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಕುವೈತ್, ಇರಾಕ್ ಸೇರಿದಂತೆ ಕೆಲವು ರ್ನಿಷ್ಟ ರಾಷ್ಟ್ರಗಳು ಮತ್ತು ಹೊರರಾಜ್ಯಗಳಿಂದ ಬಂದಿರುವ ಪ್ರಜೆಗಳ ಚಲನವಲನಗಳ ಮೇಲೆ ಗುಪ್ತಚರ ವಿಭಾಗ ಹದ್ದಿನ ಕಣ್ಣಿಟ್ಟಿದೆ ಎಂದು ಗೊತ್ತಾಗಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೈಗೊಳ್ಳಬೇಕಾದ ಭದ್ರತೆಗಳ ಬಗ್ಗೆ ಕೆಲವು ಸೂಚನೆ ನೀಡಿದ್ದರು. ಇದರ ನಡುವೆಯೇ ಕಳೆದ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯದಲ್ಲೂ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿಭದ್ರತೆಯನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಕೋಮುಸಂಘರ್ಷ ಸಂಭವಿಸುವ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಬೇಕು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ವಸನ್ನದ್ದವಾಗಿರಬೇಕೆಂದು ಅಮಿತ್ ಷಾ ತಾಕೀತು ಮಾಡಿದ್ದಾರೆ. ನಗರದ ಸೂಕ್ಷ್ಮಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ಕೆಎಸ್‍ಆರ್‍ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ನಗರದ ಯಶವಂತಪುರ ಸರ್ಕಲ್, ಗೋರಿಪಾಳ್ಯ, ಪಾದರಾಯನಪುರ, ಅಜÁದ್ ನಗರ, ಶಿವಾಜಿ ನಗರ, ನಿಲಸಂದ್ರ, ಬಕ್ಷಿ ಗಾರ್ಡನ್, ಕೆ.ಆರ್ ಮಾರ್ಕೆಟ್ ಸೇರಿದಂತೆ ಹಲವು ಕಡೆ ಬೀಗಿ ಧಿಲೀಸ್ ಭದ್ರತೆ ನಿಯೋಜಿಸಲಾಗಿದೆ.
ಬಿಜೆಪಿಯ ನಾಯಕಿ ನೂಪುರ್ ಶರ್ಮಾ ಖಾಸಗಿ ಸುದ್ದಿವಾಹಿಯ ಚರ್ಚೆಯ ಸಂದರ್ಭದಲ್ಲಿ ಮಹಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾದ ಹೇಳಿಕೆ ನೀಡಿರುವುದು ಮುಸ್ಲಿಂ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಬಿಜೆಪಿ ನಾಯಕರ ಹೇಳಿಕೆಗೆ ವಿರೋಧ ಹಾಗೂ ಖಂಡನೆಗಳು ವ್ಯಕ್ತವಾಗುತ್ತಿವೆ.
ಇದೀಗ ದೇಶದಲ್ಲಿಯೂ ಕಿಚ್ಚು ಹೆಚ್ಚಾಗಿದ್ದು, ಎಲ್ಲೆಡೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಉತ್ತರಪ್ರದೇಶ, ದೆಹಲಿ, ತಲಂಗಾಣ, ಮಹಾರಾಷ್ಟ್ರ ಸೊಲ್ಲಾಪುರ ಸೇರಿದಂತೆ ದೇಶದ ಹಲವೆಡೆ ಸಾವಿರಾರು ಮುಸ್ಲಿಂ ಸಮುದಾಯದ ಜನರು ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ರಾಜ್ಯದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ, ಕೋಮು ಹಿಂಸಾಚಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಯಾವುದೇ ಭದ್ರತಾ ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಲ್ಲಾ ಘಟಕದ ಅಧಿಕಾರಿಗಳು ಮತ್ತು ಪೊಲೀಸ್ ಠಾಣೆಗಳಿಗೆ ಖುದ್ದು ಸಿಎಂ ಅವರೇ ನಿರ್ದೇಶನ ನೀಡಿದ್ದಾರೆ.
ಈ ನಡುವೆ ಜೂನ್ 20 ಮತ್ತು 21 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿಯೂ ಎಲ್ಲೆಡೆ ಭದ್ರತೆ ಬಿಗಿಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ರವಾದಿ ಅವಮಾನಿಸಿದ್ದಕ್ಕಾಗಿ ಅಲ್ ಖೈದಾ ಈ ಹಿಂದೆ ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸುವ ಬೆದರಿಕೆಯನ್ನೊಡ್ಡಿದೆ. ಈ ಹಿನ್ನೆಲೆಯಲ್ಲಿಯೂ ಪೊಲೀಸರು ಎಲ್ಲೆಡೆ ಕಣ್ಗಾವಲನ್ನು ಹೆಚ್ಚಿಸಿದ್ದಾರೆ.