ರಾಜ್ಯ

ದೇಶದ ಹಲವು ಭಾಗಗಳಲ್ಲಿ ಮುಂದಿನ 72 ಗಂಟೆಗಳ ಕಾಲ ಭಾರೀ ಮಳೆ ಎಚ್ಚರಿಕೆ

ಐಎಂಡಿ: ದೇಶದ ಬಹುತೇಕ ರಾಜ್ಯಗಳಲ್ಲಿ ಈ ವರ್ಷ ಮಾನ್ಸೂನ್ ಅಬ್ಬರ ಜೋರಾಗಿದೆ. ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದಿನಿಂದ ಮುಂದಿನ 72 ಗಂಟೆಗಳ ಕಾಲ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದೆ.

ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಮಧ್ಯಪ್ರದೇಶ, ಛತ್ತೀಸ್‌ಗಢ, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದೇ ವೇಳೆ ಜುಲೈ 28ರಿಂದ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲೂ ಮುಂಗಾರು ಚುರುಕಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹಿಮಾಚಲದಲ್ಲಿ ಭಾರೀ ಮಳೆ ಜೊತೆಗೆ ಪ್ರವಾಹ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ: ಮುಂದಿನ 48 ರಿಂದ 72 ಗಂಟೆಗಳ ಅವಧಿಯಲ್ಲಿ ಶಿಮ್ಲಾ, ಬಿಲಾಸ್‌ಪುರ್, ಸಿರ್ಮೌರ್, ಸೋಲನ್, ಉನಾ, ಹಮೀರ್‌ಪುರ್, ಕಂಗ್ರಾ, ಮಂಡಿ, ಕುಲು, ಚಂಬಾ ಮತ್ತು ಹಿಮಾಚಲ ಪ್ರದೇಶದ ಪಕ್ಕದ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.

ಐಎಂಡಿ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ಲಾಹೌಲ್-ಸ್ಪಿಟಿ ಮತ್ತು ಕಿನ್ನೌರ್‌ನ ಕೆಲವು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ಕೆಲವೆಡೆ ದಿಢೀರ್ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಉತ್ತರಾಖಂಡದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್:ಇದೇ ವೇಳೆ ಹವಾಮಾನ ಇಲಾಖೆ, ಉತ್ತರಾಖಂಡದ ಹಲವು ಜಿಲ್ಲೆಗಳಿಗೆ ಮುಂದಿನ 3 ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಿದೆ.

ಹವಾಮಾನ ಇಲಾಖೆಯ ಪ್ರಕಾರ ಉತ್ತರಕಾಶಿ, ಬಾಗೇಶ್ವರ್, ನೈನಿತಾಲ್ ಡೆಹ್ರಾಡೂನ್, ಚಮೋಲಿ, ರುದ್ರಪ್ರಯಾಗ ಪಿಥೋರಗಢದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಬಹುದು.

ಇದರೊಂದಿಗೆ ಈ ಪ್ರದೇಶಗಳಲ್ಲಿ ಭೂಕುಸಿತದ ಅಪಾಯವೂ ಇದೆ. ಹಾಗಾಗಿ, ಮುಂದಿನ ಮೂರು ದಿನಗಳ ಕಾಲ ಈ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸುವಂತೆ ಎಚ್ಚರಿಕೆ ನೀಡಲಾಗಿದೆ.

ದೆಹಲಿಯಲ್ಲಿ ಗುಡುಗು ಸಹಿತ ಭಾರೀ ಮಳೆ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅದೇ ಸಮಯದಲ್ಲಿ, ಮುಂದಿನ ಕೆಲವು ದಿನಗಳವರೆಗೆ ಮಧ್ಯಂತರ ಮಳೆ ಮುಂದುವರಿಯುವ ಮುನ್ಸೂಚನೆ ಇದೆ.ಮತ್ತೊಂದೆಡೆ, ಹರಿಯಾಣ, ಉತ್ತರ ಪಂಜಾಬ್, ಪಶ್ಚಿಮ ಬಂಗಾಳ, ಸಿಕ್ಕಿಂ, ಕರಾವಳಿ ಕರ್ನಾಟಕ, ಮಧ್ಯ ಮಹಾರಾಷ್ಟ್ರ, ಮರಾಠವಾಡ ಮತ್ತು ಗುಜರಾತ್ ಪ್ರದೇಶದಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಉಳಿದಂತೆ ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು, ಕೇರಳ, ಲಕ್ಷದ್ವೀಪ, ರಾಜಸ್ಥಾನದ ಉಳಿದ ಭಾಗಗಳು ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿಯೂ ಭಾರೀ ಮಳೆ:ಹವಾಮಾನ ಇಲಾಖೆಯ ವರದಿ ಪ್ರಕಾರ ಮುಂದಿನ 3-4 ದಿನಗಳ ಕಾಲ ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಅದೇ ಸಮಯದಲ್ಲಿ, ಹವಾಮಾನ ಇಲಾಖೆಯು ಛತ್ತೀಸ್‌ಗಢದ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು 14 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳು ಎಚ್ಚರಿಕೆ ವಹಿಸಲು ಸೂಚನೆಗಳನ್ನು ನೀಡಿದ್ದಾರೆ.

ಆದರೆ, ಕಳೆದ ಕೆಲ ದಿನಗಳಿಂದ ಛತ್ತೀಸ್‌ಗಢದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಾರ್ಖಂಡ್‌ನ ಈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ:ಜಾರ್ಖಂಡ್‌ನ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಹವಾಮಾನ ಇಲಾಖೆ ರಾಂಚಿ ಪ್ರಕಾರ, ಸಾಹಿಬ್‌ಗಂಜ್, ಬೊಕಾರೊ, ಗಿರಿದಿಹ್, ರಾಮ್‌ಗಢ್, ಸಿಮ್ಡೆಗಾ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮುಂದಿನ ಒಂದರಿಂದ ಮೂರು ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಹವಾಮಾನ ಸಂಸ್ಥೆ ಸ್ಕೈಮೆಟ್ ವೆದರ್ ಪ್ರಕಾರ, ಮಾನ್ಸೂನ್ ಅಕ್ಷವು ಈಗ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಮೂಲಕ ಹಾದುಹೋಗುತ್ತಿದೆ. ಮಾನ್ಸೂನ್ ಟ್ರಫ್ ಜುಲೈ 28 ರ ವೇಳೆಗೆ ಭಾರತದ ಗಂಗಾ ಬಯಲು ಪ್ರದೇಶವನ್ನು ತಲುಪುತ್ತದೆ.

ಆದ್ದರಿಂದ ಜುಲೈ 28 ರಂದು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿಯೂ ಮಳೆ ಚಟುವಟಿಕೆಗಳು ತೀವ್ರಗೊಳ್ಳಲಿದ್ದು, ಕನಿಷ್ಠ ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button