
ಅಕ್ಟೋಬರ್ 9ರಂದು ಮಹಾನ್ ಋಷಿ ಕವಿ ಮಹರ್ಷಿ ವಾಲ್ಮೀಕಿಯವರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ವಾಲ್ಮೀಕಿ ಜಯಂತಿಯನ್ನು ವಾರ್ಷಿಕವಾಗಿ ಹುಣ್ಣಿಮೆಯ ರಾತ್ರಿ ಅಥವಾ ಅಶ್ವಿನ್ ತಿಂಗಳ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಈ ವರ್ಷ ಇದು ಅಕ್ಟೋಬರ್ 9ರಂದು ಬಂದಿದೆ.
ದೇಶದ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ನಾಡಿನ ಜನತೆಗೆ ವಾಲ್ಮೀಕಿ ಜಯಂತಿಯ ಶುಭಾಶಯ ತಿಳಿಸಿದ್ದಾರೆ.
‘ಪರಮ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಆದಿಕವಿ ವಾಲ್ಮೀಕಿ ಮಹರ್ಷಿಗಳಿಗೆ ಭಕ್ತಿಪೂರ್ವಕ ನಮನಗಳು.ನಾಡಿನ ಸಮಸ್ತ ಜನತೆಗೆ ಶ್ರೀ ವಾಲ್ಮೀಕಿ ಜಯಂತಿಯ ಶುಭಾಶಯಗಳು’ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ‘ಸ್ವಪರಿಶ್ರಮದ ಮೂಲಕ ರಾಮಾಯಣವೆಂಬ ಮಹಾಕಾವ್ಯ ರಚಿಸಿ, ಮಹರ್ಷಿಯಂತಹ ಉನ್ನತ ಸ್ಥಾನಕ್ಕೇರಿದ ವಾಲ್ಮೀಕಿಯವರ ಜೀವನ – ಸಾಧನೆ ನೆಲದ ತಳಸಮುದಾಯಗಳ ಜನರಿಗೆ ಸ್ಪೂರ್ತಿಯ ಚಿಲುಮೆ. ನಾಡಿನ ಜನತೆಗೆ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು’ ಎಂದು ಶುಭ ಹಾರೈಸಿದ್ದಾರೆ.
ಮಹಾಕಾವ್ಯ ರಾಮಾಯಣವನ್ನು ರಚಿಸಿ ಮಹರ್ಷಿಯಾದ ಮಹಾನ್ ಚೈತನ್ಯಮೂರ್ತಿ ಪೂಜ್ಯ ವಾಲ್ಮೀಕಿ ಮಹರ್ಷಿ ಅವರ ಪುಣ್ಯ ಜಯಂತಿಯಂದು ಅವರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು. ರಾಮಾಯಣದ ಮೂಲಕ ಪರಮ ಪಾವನ ಜೀವನ ಮೌಲ್ಯಗಳನ್ನು ಬೋಧಿಸಿದ ಅವರು ಅಮರ, ಅಜರಾಮರ’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಟ್ವೀಟ್ ಮಾಡಿದ್ದು, ‘ನಾಡಿನ ಸಮಸ್ತ ಜನತೆಗೆ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯ ಹೃತ್ಪೂರ್ವಕ ಶುಭಾಶಯಗಳು’ ಎಂದು ಶುಭ ಹಾರೈಸಿದ್ದಾರೆ.
‘ಮಹರ್ಷಿ ವಾಲ್ಮೀಕಿಯವರ ಮಹಾಕಾವ್ಯ ರಾಮಾಯಣವು ಪವಿತ್ರ ಗ್ರಂಥವಾಗಿರುವಂತೆಯೇ, ಅವರ ಜೀವನವು ಎಲ್ಲ ಅಡೆತಡೆಗಳನ್ನು ಮೀರಿ ಸಾಧನೆಯೆಡೆಗೆ ಮುನ್ನುಗ್ಗುವವರಿಗೊಂದು ದಾರಿದೀಪ. ಮಹರ್ಷಿ ವಾಲ್ಮೀಕಿಯವರನ್ನು ಹೃದಯಾಂತರಾಳದಿಂದ ಸ್ಮರಿಸುತ್ತಾ, ನಾಡಿನ ಜನರಿಗೆ ‘ವಾಲ್ಮೀಕಿ ಜಯಂತಿ’ ಶುಭಾಶಯ ಕೋರುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.