ರಾಷ್ಟ್ರಿಯ

ದೇಶದ ಉನ್ನತ ನ್ಯಾಯಾಲಯಗಳಲ್ಲಿ ನಂಬಿಕೆಯನ್ನಿಟ್ಟಿ ಅಲ್ಲಿಯೇ ನ್ಯಾಯದಿಂದ ವಂಚಿತಳಾದರೇ ಮಹಿಳೆ ಎಲ್ಲಿಗೆ ಹೋಗಬೇಕು?’ ಎಂದು ಪ್ರಶ್ನಿಸಿದ್ದ ಸಂತ್ರಸ್ತೆ ಬಿಲ್ಕಿಸ್ ಬಾನು

ಅಹಮದಾಬಾದ್: ಬಿಲ್ಕಿಸ್ ಬಾನು ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿರುವುದರ ಬಗ್ಗೆ ಇದೇ ಮೊದಲ ಬಾರಿಗೆ ಸಂತ್ರಸ್ತೆ ಬಿಲ್ಕಿಸ್ ಬಾನು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

‘ಅಪರಾಧಿಗಳನ್ನು ಕ್ಷಮಾಪಣೆ ನೀತಿ ಅ‌ನ್ವಯ ಬಿಡುಗಡೆ ಮಾಡಿರುವುದು ದೇಶದ ನ್ಯಾಯಾಂಗ ವ್ಯವಸ್ಥೆ ಮೇಲಿನ ನನ್ನ ನಂಬಿಕೆಯನ್ನೇ ಬುಡಮೇಲು ಮಾಡಿದೆ’ ಎಂದು ಬಿಲ್ಕಿಸ್ ಬುಧವಾರ ತಮ್ಮ ವಕೀಲೆ ಶೋಭಾ ಅವರ ಮೂಲಕ ಹೇಳಿದ್ದಾರೆ.
‘ನನ್ನ ಜೀವನವನ್ನು ಹಾಳುಮಾಡಿದ ಮತ್ತು ನನ್ನ 3 ವರ್ಷದ ಮಗಳನ್ನು ನನ್ನಿಂದ ಕಿತ್ತುಕೊಂಡ ರಾಕ್ಷಸರು ಈ ರೀತಿ ಹೊರಬರುತ್ತಾರೆ ಎಂದುಕೊಂಡಿರಲಿಲ್ಲ. ಇದರಿಂದ ನ್ಯಾಯದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಗುಜರಾತ್ ಸರ್ಕಾರದ ನಿರ್ಧಾರಿಂದ ನನಗೆ ತೀವ್ರ ಆಘಾತವಾಗಿದೆ. ಮಾತುಗಳೇ ಬರುತ್ತಿಲ್ಲ. ಇನ್ನು ನಾನು ಅಸಹಾಯಕಳು’ ಎಂದು ಅವರು ಕಂಬನಿ ಮಿಡಿದಿದ್ದಾರೆ.

‘ನಾನು ದೇಶದ ಉನ್ನತ ನ್ಯಾಯಾಲಯಗಳಲ್ಲಿ ನಂಬಿಕೆಯನ್ನಿಟ್ಟಿದೆ. ಆದರೆ, ಅಲ್ಲಿಯೇ ಈ ರೀತಿಯಾಗಿ ಒಬ್ಬ ಮಹಿಳೆ ನ್ಯಾಯದಿಂದ ವಂಚಿತಳಾದರೇ ಅವಳು ಎಲ್ಲಿಗೆ ಹೋಗಬೇಕು?’ ಎಂದು ಪ್ರಶ್ನಿಸಿದ್ದಾರೆ.
ಅಪರಾಧಿಗಳು ಹೊರಗೆ ಬಂದಿರುವುದರಿಂದ ನನಗೆ ಭಯ ಶುರುವಾಗಿದೆ. ಸರ್ಕಾರ ನನಗೆ ಹಾಗೂ ನನ್ನ ಕುಟುಂಬದವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಬಿಲ್ಕಿಸ್‌ ಬಾನು ಮೇಲೆ ಅತ್ಯಾಚಾರ ಮತ್ತು ಅವರ ಕುಟುಂಬದ 7 ಮಂದಿಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಕೈದಿಗಳಿಗೆ ಗುಜರಾತ್‌ ಸರ್ಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನದಂದು ಶಿಕ್ಷೆ ಅವಧಿ ಕಡಿತಗೊಳಿಸಿ, ಬಿಡುಗಡೆ ಮಾಡಿತ್ತು.


ಬಿಲ್ಕಿಸ್‌ ಬಾನು ಮೇಲೆ 2002ರ ಗೋಧ್ರಾ ಹತ್ಯಾಕಾಂಡದ ನಂತರದಲ್ಲಿ 11 ಮಂದಿ ಅತ್ಯಾಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು 5 ತಿಂಗಳ ಗರ್ಭಿಣಿ ಆಗಿದ್ದರು. ಅಪರಾಧಿಗಳನ್ನು ಸ್ವಾಂತಂತ್ರ್ಯದ ದಿನವೇ ಬಿಡುಗಡೆ ಮಾಡಿರುವ ಗುಜರಾತ್‌ ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಖಂಡಿಸಿದ್ದಾರೆ.
ಈ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಆರೋಪದ ಮೇಲೆ 11 ಮಂದಿಗೆ 2008ರ ಜ.21 ಮುಂಬೈ ವಿಶೇಷ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಅವರ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು.

Related Articles

Leave a Reply

Your email address will not be published. Required fields are marked *

Back to top button