ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ ಕೊರೋನಾ, 24 ಗಂಟೆಯಲ್ಲಿ 7584 ಮಂದಿಗೆ ಪಾಸಿಟಿವ್
India reports 7584 fresh COVID cases

ನಾಲ್ಕನೆ ಅಲೆಯ ಭೀತಿಯಿಲ್ಲ ಎಂಬ ವರದಿಯ ಹೊರತಾಗಿಯೂ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ನಿನ್ನೆಯ ದೈನಂದಿನ ಸೋಂಕು 7,584ಕ್ಕೆ ಏರಿಕೆಯಾಗಿದೆ, 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ದೈನಂದಿನ ಸೋಂಕಿನ ಪ್ರಮಾಣ ಹಲವಾರು ತಿಂಗಳಿನಿಂದ ಶೇ.1ರ ಒಳಗೆ ನಿಯಂತ್ರಣದಲ್ಲಿತ್ತು, ಆದರೆ ನಿನ್ನೆಯಿಂದ ಶೇ.2ರ ಗಡಿ ದಾಟಿದೆ, ಇಂದು ಬೆಳಗ್ಗೆ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದಿನದ ಸೋಂಕು ಶೇ.2.26ರಷ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 4,32,05,106ರಷ್ಟಾಗಿದೆ. ವಾರದ ಸೋಂಕಿನ ಪ್ರಮಾಣ ಶೇ.1.50ರಷ್ಟು ಎಂದು ವರದಿ ತಿಳಿಸಿದೆ.
ಸಕ್ರಿಯ ಪ್ರಕರಣಗಳು 3769ರಷ್ಟು ಹೆಚ್ಚಾಗಿವೆ, ದೇಶದ ವಿವಿಧ ಆಸ್ಪತ್ರೆಗಳಲ್ಲಿ 36,267 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಮಾಣ ಶೇ.0.07ರಿಂದ ಶೇ.0.08ರಷ್ಟು ಹೆಚ್ಚಾಗಿದೆ. ಸೋಂಕಿನಿಂದ ಚೇತರಿಕೆಯೂ ಆಶಾದಾಯಕವಾಗಿದೆ ಶೇ..98.70ರಷ್ಟಿದ್ದು,4,26,44,092ರಷ್ಟು ಮಂದಿ ಗುಣಮುಖರಾಗಿದ್ದಾರೆ.
ಕೇರಳದಲ್ಲಿ 17, ದೆಹಲಿ, ರಾಜಸ್ತಾನದಲ್ಲಿ ತಲಾ ಇಬ್ಬರು, ಮಹಾರಾಷ್ಟ್ರ, ಸಿಕ್ಕಿಂ, ಉತ್ತರ ಪ್ರದೇಶದಲ್ಲಿ ತಲಾ ಒಬ್ಬರು ಸೇರಿ ಒಟ್ಟು 24 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಒಟ್ಟು ಸಂಖ್ಯೆ 5,24,747ರಷ್ಟಾಗಿದ್ದು, ಶೇಕಡಾವಾರು 1.21ರ ಆಜುಬಾಜಿನಲ್ಲಿದೆ. ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕೇರಳ, ಕರ್ನಾಟಕ, ತಮಿಳುನಾಡು, ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿವೆ.
ಕೋವಿಡ್ ನಿಯಂತ್ರಣಕ್ಕೆ ಲಸಿಕಾ ಅಭಿಯಾನ ಕೂಡ ಚಾಲ್ತಿಯಲ್ಲಿದ್ದು ಈವರೆಗೂ 194.76 ಕೋಟಿ ಡೋಸ್‍ಗಳನ್ನು ನೀಡಲಾಗಿದೆ.