ದಾಖಲೆಗಳಲ್ಲಿ ನಂಬಿಕೆ ಇಲ್ಲ, ಸರಣಿ ಗೆಲ್ಲುವುದೇ ಮುಖ್ಯ : ದ್ರಾವಿಡ್
Coach Rahul Dravid series IND vs SA

ದಾಖಲೆ ಬರೆಯುವುದು ಅಂಕಿ ಸಂಖ್ಯೆಗಳನ್ನು ಹೆಚ್ಚಿಸುವಲ್ಲಿ ನನಗೆ ನಂಬಿಕೆ ಇಲ್ಲ ನಮಗೆ ಕೇವಲ ಸರಣಿ ಗೆಲ್ಲುವುದೇ ಮುಖ್ಯವಾಗಿರುತ್ತದೆ ಎಂದ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರು ಹೇಳಿದ್ದಾರೆ.
ಟ್ವೆಂಟಿ-20 ಮಾದರಿಯಲ್ಲಿ ಸತತ 12 ಪಂದ್ಯಗಳನ್ನು ಜಯಿಸುವ ಮೂಲಕ ಆಫ್ಘಾನಿಸ್ತಾನದೊಂದಿಗೆ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದ್ದು ನಾಳೆ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಚುಟುಕು ಪಂದ್ಯವನ್ನು ಗೆದ್ದರೆ ಟೀಂ ಇಂಡಿಯಾ ಸತತವಾಗಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡವಾಗುತ್ತದೆ.
ರೋಹಿತ್ ಶರ್ಮಾರ ಅಲಭ್ಯತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ದ್ರಾವಿಡ್ ಅವರು, ರೋಹಿತ್ ಈಗ ಟೀಂ ಇಂಡಿಯಾದ ಮೂರು ಮಾದರಿಯ ಕ್ರಿಕೆಟ್‍ಗೆ ನಾಯಕರಾಗಿರುವುದರಿಂದ ಅವರಿಗೆ ಒತ್ತಡವನ್ನು ತಗ್ಗಿಸುವ ಸಲುವಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಅಲ್ಲದೆ ಎಲ್ಲ ಸರಣಿಯಲ್ಲೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‍ಪ್ರೀತ್ ಬೂಮ್ರಾರಂತಹ ಅನುಭವಿ ಆಟಗಾರರನ್ನು ಬಯಸುವುದು ಕೂಡ ಸರಿಯಲ್ಲ ಎಂದು ಹೇಳಿದರು.
ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ಚುಟುಕು ವಿಶ್ವಕಪ್ ನಡೆಯಲಿರುವುದರಿಂದ ಹಿರಿಯ ಆಟಗಾರರ ಮೇಲೆ ಒತ್ತಡ ತಗ್ಗಿಸುವ ಅವಶ್ಯಕತೆ ಇದೆ, ಅಲ್ಲದೆ ಹಿರಿಯ ಆಟಗಾರರು ಇಂಗ್ಲೆಂಡ್ ವಿರುದ್ಧದ 5ನೆ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದಾರೆ.
ಕೆ.ಎಲ್.ರಾಹುಲ್ ಕೂಡ ಉತ್ತಮ ನಾಯಕನ ಗುಣವನ್ನು ಹೊಂದಿದ್ದು ದಕ್ಷಿಣ ಆಫ್ರಿಕಾದ ಸರಣಿಯ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ರಾಹುಲ್ ದ್ರಾವಿಡ್ ಆತ್ಮವಿಶ್ವಾಸದ ಮಾತುಗಳನ್ನಾಡಿದರು.