ದಸರಾ ಹಿನ್ನೆಲೆಯಲ್ಲಿ ಸುಲಿಗೆಗಿಳಿದ ಖಾಸಗಿ ಬಸ್‍ಗಳು, ದೂರು ನೀಡಲು ಇಲ್ಲಿದೆ ಸಹಾಯವಾಣಿ ಸಂಖ್ಯೆ

ದಸರಾ ಹಬ್ಬದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರರ ನಗರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ನಿಗಪಡಿಸಿದ ದರವನ್ನಷ್ಟೇ ಪಡೆಯಬೇಕು. ಇಲ್ಲದಿದ್ದರೆ ರೂಟ್ ಪರ್ಮಿಟ್ ತಕ್ಷಣದಿಂದಲೇ ರದ್ದು ಪಡಿಸಲಾಗುತ್ತದೆ.
ಇದರಲ್ಲಿ ಯಾವುದೇ ಕಾರಣಕ್ಕೂ ರಾಜೀ ಆಗುವುದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಎಚ್ಚರಿಸಿದ್ದಾರೆ.ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬಂದ ಹಿನ್ನಲೆಯಲ್ಲಿ ದರ ಹೆಚ್ಚು ಮಾಡುವ ಖಾಸಗಿ ಬಸ್‍ಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಅಧಿಕಾರಿಗಳ ಹತ್ತು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ.
ರಾಜ್ಯಾದ್ಯಂತ ಈ ತಂಡ ತಪಾಸಣೆ ಕಾರ್ಯಚರಣೆ ನಡೆಸಲಿದೆ ಎಂದು ಹೇಳಿದ್ದಾರೆ.ಒಂದು ವೇಳೆ ಹೆಚ್ಚು ಟಿಕೆಟ್ ದರ ಕೇಳಿದರೆ ಪ್ರಯಾಣಿಕರು ಸಹಾಯವಾಣಿಗೆ ಕರೆ ಮಾಡಿ ಬಸ್ ನಂಬರ್, ಮಾರ್ಗ ತಿಳಿಸಿ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು.
ಇದಕ್ಕಾಗಿ ಸಾರಿಗೆ ಇಲಾಖೆಯು ಸಹಾಯವಾಣಿ ಆರಂಭಿಸಿದ್ದು 94498 63429/ 94498 63426 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.ಬೆಂಗಳೂರಿನಲ್ಲೇ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ಬೇಕಾಬಿಟ್ಟಿ ವಸೂಲಿಗೆ ಕಡಿವಾಣ ಹಾಕಲು ಈ ತಂಡಗಳನ್ನು ನಿಯೋಜನೆ ಮಾಡಲಾಗಿದೆ ಎಂದು ರಾಮುಲು ಟ್ವಿಟರ್‍ನಲ್ಲಿ ಮನವಿ ಮಾಡಿದ್ದಾರೆ.
ಕಲಾಸಿಪಾಳ್ಯ ಬಸ್ ನಿಲ್ದಾಣ, ಮೆಜೆಸ್ಟಿಕ್ ಮತ್ತು ಸುತ್ತಲಿನ ಪ್ರದೇಶ, ಶಾಂತಿನಗರ, ಮೈಸೂರು ರಸ್ತೆ ಸೇರಿದಂತೆ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಲಿವೆ ಎಂದಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಮಾರ್ಗಸೂಚಿಯಂತೆ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆ ಕುರಿತು ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.
ಆಯಾ ರೂಟ್‍ಗಳಲ್ಲಿ ನಿಗದಿತ ದರವನ್ನಷ್ಟೇ ಪಡೆಯಬೇಕು ಎಂದು ಸೂಚನೆ ನೀಡಿದ್ದಾರೆ.ಪ್ರಯಾಣಿಕರ ರಕ್ಷಣೆ ನಮ್ಮ ಇಲಾಖೆಯ ಮೊದಲ ಆದ್ಯತೆ. ಕಿರಿಕಿರಿ ಉಂಟು ಮಾಡುವುದು, ಇಲ್ಲವೇ ತೊಂದರೆ ಕೊಟ್ಟು ಹೆಚ್ಚಿನ ದರ ವಸೂಲಿ ಮಾಡಿದರೆ ಸಹಿಸುವುದಿಲ್ಲ.
ಹಾಗೊಂದು ವೇಳೆ ನನ್ನ ಗಮನಕ್ಕೆ ಬಂದರೆ ಅಂತಹ ಬಸ್ ಮಾಲಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಗೆ ತೊಂದರೆ ಕೊಡದೆ, ಯಾವ ಯಾವ ರೂಟ್‍ಗಳಿಗೆ ಎಷ್ಟು ದರ ನಿಗದಪಡಿಸಿದೆಯೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು.
ಅದನ್ನು ಬಿಟ್ಟು ಹೆಚ್ಚಿನ ಹಣ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯ ಎಂದು ಸಚಿವ ರಾಮುಲು ತಿಳಿಸಿದ್ದಾರೆ.