
ಕೋಟಿ ಕೋಟಿ ಹಣವನ್ನು ಜೇಬಿಗಿರಿಸಿಕೊಂಡು ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ತೋರಿದ ಆಟಗಾರರು ಮುಂಬರುವ ಟ್ವೆಂಟಿ-20 ವಿಶ್ವಕಪ್‍ನಲ್ಲಿ ಸ್ಥಾನ ಪಡೆಯಲು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯು ದೊಡ್ಡ ಅಗ್ನಿಪರೀಕ್ಷೆಯಾಗಿದೆ.
ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ,ಜಸ್‍ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಅಂತಹ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಐಪಿಎಲ್‍ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾರಥ್ಯ ವಹಿಸಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಟೀಂ ಇಂಡಿಯಾದ ನಾಯಕನಾಗಿದ್ದು ಬಹು ದೊಡ್ಡ ಅಗ್ನಿ ಪರೀಕ್ಷೆಯನ್ನೇ ಎದುರಿಸಲು ಸಜ್ಜಾಗಿದೆ.
ಜೂನ್ 9 ರಿಂದ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಆಡುವ 11 ಆಟಗಾರರಲ್ಲಿ ಯಾವ ಯುವ ಆಟಗಾರರು ಸ್ಥಾನ ಪಡೆಯುತ್ತಾರೆ ಎಂಬ ಲೆಕ್ಕಾಚಾರಗಳು ಶುರುವಾಗಿದೆ, ಸರಣಿಯನ್ನು ಶತಾಯ ಗತಾಯ ಗೆಲ್ಲಲೇಬೇಕೆಂದು ಹಠ ತೊಟ್ಟಿರುವ ಟೀಂ ಇಂಡಿಯಾ ಆಟಗಾರರು ನೆಟ್ಸ್‍ನಲ್ಲಿ ಬೆವರು ಹರಿಸುತ್ತಿದ್ದಾರೆ.
ಐಪಿಎಲ್‍ನಲ್ಲಿ ಕೆಕೆಆರ್ ಪರ ಆಡಿದ್ದ ವೆಂಕಟೇಶ್ ಅಯ್ಯರ್ ಅವರು ಕಳೆದ ಬಾರಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದರೂ 2022ರ ಐಪಿಎಲ್ ಆಡಿದ 12 ಪಂದ್ಯಗಳಲ್ಲಿ ಕೇವಲ 182 ರನ್‍ಗಳನ್ನು ಗಳಿಸಿ ನಿರಾಸೆ ಅನುಭವಿಸಿದ್ದು, ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ದಕ್ಷಿಣ ಆಫ್ರಿಕಾ ಸರಣಿ ಉತ್ತಮ ಅವಕಾಶವಾಗಿದೆ.
ಎದುರಾಳಿ ಬ್ಯಾಟ್ಸ್‍ಮನ್‍ಗಳಿಗೆ ತಮ್ಮ ಸ್ಪಿನ್ ಮೋಡಿಯಿಂದ ಜಾದೂ ಮಾಡುವಲ್ಲಿ ಎಡವಿರುವ ಡೆಲ್ಲಿ ಕ್ಯಾಪಿಟಲ್ಸ್‍ನ ಅಲೌಂಡರ್ ಅಕ್ಷರ್‍ಪಟೇಲ್‍ಗೂ ಹರಿಣಿಗಳ ವಿರುದ್ಧದ ಸರಣಿಯು ಮಹತ್ವದ್ದಾಗಿದೆ, 2022ರ ಐಪಿಎಲ್‍ನಲ್ಲಿ 13 ಪಂದ್ಯ ಆಡಿದ ಅಕ್ಷರ್ ಗಳಿಸಿದ್ದು 6 ವಿಕೆÀಟ್ ಮಾತ್ರ.ಡೆಲ್ಲಿ ಕ್ಯಾಪಿಟಲ್ಸ್‍ನ ನಾಯಕ ರಿಷಭ್‍ಪಂತ್ ಕೂಡ 2022ರ ಐಪಿಎಲ್‍ನಲ್ಲಿ ಹೇಳಿಕೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ, ಆಡಿದ 14 ಪಂದ್ಯಗಳಲ್ಲಿ 340 ಗಳಿಸಿದರೂ ಕೂಡ ಒಂದೇ ಒಂದು ಅರ್ಧಶತಕ ಗಳಿಸುವಲ್ಲಿ ಎಡವಿದ್ದು ಆ ಕೊರತೆಯನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ನೀಗಿಸಿಕೊಳ್ಳಲು ರಿಷಭ್ ಪಂತ್ ಕಾತರಿಸುತ್ತಿದ್ದಾರೆ.