ಅಂತಾರಾಷ್ಟ್ರೀಯಕ್ರೀಡೆರಾಷ್ಟ್ರಿಯ
Trending

ಥಾಮಸ್‌ ಕಪ್‌ ಟೂರ್ನಿ: ಮೊದಲ ಬಾರಿ ಟ್ರೋಫಿ ಗೆದ್ದು ಇತಿಹಾಸ ಬರೆದ ಭಾರತ!

ಬ್ಯಾಂಕಾಕ್‌: ಕೆಚ್ಚೆದೆಯ ಪ್ರದರ್ಶನ ನೀಡಿದ ಭಾರತದ ಬ್ಯಾಡ್ಮಿಂಟನ್‌ ತಂಡ ಇಲ್ಲಿ ನಡೆದ ಪ್ರತಿಷ್ಠಿತ ಥಾಮಸ್‌ ಕಪ್‌ ಟೂರ್ನಿಯಲ್ಲಿ ಮೊತ್ತ ಮೊದಲ ಬಾರಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಹಾಗೂ 14 ಬಾರಿಯ ಚಾಂಪಿಯನ್ಸ್‌ ಇಂಡೊನೇಷ್ಯಾ ತಂಡವನ್ನು 3-0 ಅಂತರದಲ್ಲಿ ಬಗ್ಗುಬಡಿದ ಭಾರತ ಟ್ರೋಫಿ ಎತ್ತಿ ಹಿಡಿಯಿತು.
ಭಾರತಕ್ಕೆ ವಿಶ್ವಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಪದಕ ಗೆದ್ದುಕೊಟ್ಟಿರುವ ಚಾಂಪಿಯನ್‌ ಆಟಗಾರರಾದರ ಕಿಡಂಬಿ ಶ್ರೀಕಾಂತ್‌ ಮತ್ತು ಲಕ್ಷ್ಯ ಸೇನ್‌ ಅಕ್ಷರಶಃ ಮಿಂಚಿನ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಡಬಲ್ಸ್‌ ವಿಭಾಗದಲ್ಲೂ ಯುವ ಜೋಡಿ ಚಿರಾಟ್‌ ಶೆಟ್ಟಿ ಮತ್ತು ಸಾತ್ವಿಕ್‌ ಸಾಯ್‌ರಾಜ್‌ ಸ್ಮರಣೀಯ ಪ್ರದರ್ಶನ ಹೊರತಂದು ಸ್ಮರಣೀಯ ಜಯ ತಂದುಕೊಟ್ಟರು.

ನಾಕ್‌ಔಟ್‌ ಹಂತದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಭಾರತ ತಂಡ ಫೈನಲ್‌ನಲ್ಲಿ ಅಧಿಕಾರಯುತ ಪ್ರದರ್ಶನ ನೀಡಿ ಹುಬ್ಬೇರುವಂತೆ ಮಾಡಿತು. ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ಕಣಕ್ಕಿಳಿದ ಕಿರಿಯರ ವಿಭಾಗದಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಲಕ್ಷ್ಯ ಸೇನ್‌, ಆರಂಭಿಕ ಗೇಮ್‌ ಸೋತರೂ 8-21, 21-17, 21-16 ಅಂತರದ ಗೇಮ್‌ಗಳಿಂದ ಅನುಭವಿ ಆಟಗಾರ ಹಾಗೂ ವಿಶ್ವದ 5ನೇ ಶ್ರೇಯಾಂಕ ಹೊಂದಿರುವ ಆಂಥೊನಿ ಸಿನಿಸುಕ ಗಿನ್ಟಿಂಗ್‌ ವಿರುದ್ಧ ಜಯ ದಾಖಲಿಸಿ 1-0 ಅಂತರದ ಮುನ್ನಡೆ ತಂದು ಕೊಟ್ಟರು.

ನಂತರದ ನಡೆದ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ವಿಶ್ವದ 8ನೇ ಶ್ರೇಯಾಂಕ ಹೊಂದಿರುವ ಸಾತ್ವಿಕ್‌ ಸಾಯ್‌ರಾಜ್ ಮತ್ತು ಚಿರಾಗ್‌ ಶೆಟ್ಟಿ ಒತ್ತಡ ನಿಭಾಯಿಸುವ ಮೂಲಕ ಇಂಡೊನೇಷ್ಯಾದ ಚಾಂಪಿಯನ್‌ ಜೋಡಿಯ ಸವಾಲನ್ನು ಹತ್ತಿಕ್ಕಿದರು. ಚಿರಾಗ್‌-ಸಾತ್ವಿಕ್‌ ಜೋಡಿ, ಮೊದಲ ಗೇಮ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡುವೆಯೂ ನಿರಾಶೆ ಅನುಭವಿಸಿತ್ತು. ಆದರೆ, ಹೋರಾಟ ಬಿಡದ ಭಾರತೀಯ ಆಟಗಾರರು 18-21, 23-21, 21-19 ಅಂಕಗಳ ಅಂತರದ ಗೇಮ್‌ಗಳಿಂದ ಮೊಹಮ್ಮದ್‌ ಅನ್ಹಾಸ್‌ ಮತ್ತು ಕೆವಿನ್‌ ಸಂಜಯ ಸುಕಮುಲ್ಜೊ ಎದುರು ಮೇಲುಗೈ ಸಾಧಿಸಿತು. ಇದರೊಂದಿಗೆ ಭಾರತ 2-0 ಅಂತರದ ಮುನ್ನಡೆಯೊಂದಿಗೆ ಆಯ್ಮವಿಶ್ವಾಸ ಹೆಚ್ಚಿಸಿಕೊಂಡಿತು.

ಇದಾದ ಬಳಿಕ ನಡೆದ ಮತ್ತೊಂದು ಸಿಂಗಲ್ಸ್‌ ಪಂದ್ಯದಲ್ಲೂ ಯಶಸ್ಸು ಭಾರತದ ಪಾಲಾಯಿತು. ವಿಶ್ವದ ಮಾಜಿ ನಂ.1 ಆಟಗಾರ ಹೈದರಾಬಾದ್‌ ಮೂಲದವರಾದ ಕಿಡಂಬಿ ಶ್ರೀಕಾಂತ್‌, ಏಷ್ಯನ್‌ ಚಾಂಪಿಯನ್‌ ಜೊನಾಥನ್‌ ಕ್ರಿಸ್ಟೀ ಅವರನ್ನು ಕೇವಲ 48 ನಿಮಿಷಗಳ ಅಂತರದಲ್ಲಿ 21-15 23-21 ಅಂತರದ ಗೇಮ್‌ಗಳಿಂದ ಬಗ್ಗುಬಡಿದರು. ಈ ಜಯದೊಂದಿಗೆ ಭಾರತ ತಂಡ ಬೆಸ್ಟ್‌ ಆಫ್‌ 5 ಸ್ಪರ್ಧೆಯಲ್ಲಿ 3-0 ಅಂತರದಲ್ಲಿ ಗೆದ್ದು ಮೊತ್ತ ಮೊದಲ ಬಾರಿ ಚಾಂಪಿಯನ್ಸ್‌ ಎನಿಸಿಕೊಳ್ಳುವ ಮೂಲಕ ಇತಿಹಾಸ ಬರೆಯಿತು.

ಭಾರತ ತಂಡ ಥಾಮಸ್‌ ಕಪ್‌ ಜಯ ದಾಖಲಿಸುತ್ತಿದ್ದಂತೆಯೇ ಟ್ವಿಟರ್‌ನಲ್ಲಿ ಮೆಚ್ಚುಗೆಯ ಸುರಿಮಳೆಯೇ ಹರಿಯಿತು. ಚಾರಿತ್ರಿಕ ದಾಖಲೆ ಎಂದು ಶ್ಲಾಘಿಸಿದ ಪ್ರಧಾನಿ ಮೋದಿ ಭಾರತ ತಂಡಕ್ಕೆ ಅಭಿನಂದಿಸಿದರು. ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರರಾದ ಗೌತಮ್‌ ಗಂಭೀರ್‌ ಮತ್ತು ವಸೀಮ್‌ ಜಾಫರ್‌ ಸೇರಿದಂತೆ ಹಲವು ದಿಗ್ಗಜರು ಟ್ರೋಫಿ ಗೆದ್ದ ಭಾರತ ತಂಡಕ್ಕೆ ಶುಭ ಹಾರೈಸಿದರು.
1949ರಿಂದ ಆಯೋಜನೆ ಆಗುತ್ತಾ ಬಂದಿರುವ ಪ್ರತಿಷ್ಠಿತ ಥಾಮಸ್‌ ಕಪ್‌ ಟೂರ್ನಿಯಲ್ಲಿ ಈ ಬಾರಿ ವಿಶ್ವದ ಬಲಿಷ್ಠ 16 ತಂಡಗಳು ಪಾಲ್ಗೊಂಡಿದ್ದವು. ಟೂರ್ನಿಯಲ್ಲಿ ಈ ವರ್ಷವೇ ಮೊದಲ ಬಾರಿ ಫೈನಲ್‌ ತಲುಪಿದ ಸಾಧನೆ ಮಾಡಿದ ಭಾರತ, ಟ್ರೋಫಿ ಕೂಡ ಗೆದ್ದು ಅತ್ಯಂತ ಸ್ಮರಣೀಯ ಗೆಲುವು ದಕ್ಕಿಸಿಕೊಂಡಿದೆ.

Related Articles

Leave a Reply

Your email address will not be published. Required fields are marked *

Back to top button