ರಾಜ್ಯ

ತಾರಕಕ್ಕೇರಿದ ಮೊಟ್ಟೆ v/s ಸಾವರ್ಕರ್ ವಿವಾದ

ರಾಜ್ಯ ರಾಜಕಾರಣದಲ್ಲಿ ಇದೀಗ ಮೊಟ್ಟೆ V/S ವೀರ ಸಾರ್ವಕರ್ ಭಾವಚಿತ್ರ ಸುಟ್ಟು ಹಾಕಿದ ವಿವಾದ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಸಂಘರ್ಷ ತಾರಕಕ್ಕೇರಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಎಸೆದ ಮೊಟ್ಟೆ ಪ್ರಕರಣ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಬಿಜೆಪಿ ವಿರುದ್ಧ ಪ್ರತಿಭಟನೆ ಮುಂದುವರೆಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಕೂಡ ಸ್ವಾತಂತ್ರ್ಯ ಹೋರಾಟಗಾರ ವೀರಸಾರ್ವಕರ್ ಭಾವಚಿತ್ರವನ್ನು ಸುಟ್ಟು ಹಾಕಿದ್ದಕ್ಕೆ ಆಕ್ರೋಶಗೊಂಡ ಪ್ರತಿಭಟನೆ, ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಂಘರ್ಷ ಕ್ಷಣ ಕ್ಷಣಕ್ಕೂ ತಾರಕಕ್ಕೇರುತ್ತಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರ ನಡುವೆ ಮಾತಿನ ಸಮರ ಮುಂದುವರೆದಿದೆ.

ಗುರುವಾರ ಮಡಿಕೇರಿಯಲ್ಲಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿದ್ದರು. ಇದರಿಂದ ರೊಚ್ಚಿಗೆದ್ದಿರುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರವೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಮೈಸೂರು, ಮಡಿಕೇರಿ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ ಸೇರಿದಂತೆ ಮತ್ತಿತರ ಕಡೆ ಪ್ರತಿಭಟನೆಯನ್ನು ನಡೆಸಿ ಆಕ್ರೋಶವನ್ನು ಹೊರಹಾಕಿದರು.ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಕೂಡ ವೀರ ಸಾರ್ವಕರ್ ಭಾವಚಿತ್ರ ಸುಟ್ಟು ಹಾಕಿದ್ದನ್ನು ಖಂಡಿಸಿ ಅನೇಕ ಕಡೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ಕೆಲವು ಕಡೆ ತಳ್ಳಾಟ, ಮಾತಿನ ಚಕಮಕಿ, ರಸ್ತೆತಡೆ, ಟೈರ್‍ಗೆ ಬೆಂಕಿ, ಕಚೇರಿ ಮುತ್ತಿಗೆ, ಆರೋಪ, ಪ್ರತ್ಯಾರೋಪಗಳು ನಡೆದಿವೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಮಧ್ಯಪ್ರವೇಶಿಸಿ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು.

ಇದರಿಂದ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಕೂಡ ಮುತ್ತಿಗೆ ಹಾಕಲು ಮುಂದಾದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ವೇಳೆ ವೀರ ಸಾವರ್ಕರ್ ಫೋಟೋ ಸುಟ್ಟಿರುವುದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಣ ಎಂ.ಬಿ.ಪಾಟೀಲ್ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಧಾರವಾಡ ಜಿಲ್ಲಾಧ್ಯಕ್ಷ ಸಂಜೀವ್ ಕಪಾಟಕರ್ ಸೇರಿದಂತೆ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.

ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರು ವೀರ ಸಾವರ್ಕರ್ ಪ್ರತಿಕೃತಿ ದಹಿಸಿದ್ದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಎಂ ಬಿ ಪಾಟೀಲ್ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.ಎಫ್‍ಐಆರ್ ದಾಖಲು: ಕೊಡಗು ಜಿಲ್ಲಾ ಪ್ರವಾಸದ ವೇಳೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ, 9 ಬಿಜೆಪಿ ಹಿಂದೂಪರ ಕಾರ್ಯಕರ್ತರ ಮೇಲೆ ಎಫ್‍ಐಆರ್ ದಾಖಲಾಗಿದೆ.

ಕವನ್ ಕಾರ್ಯಪ್ಪ, ಉಮೇಶ್ ಸುಬ್ರಮಣಿ, ಸತ್ಯ ಕರ್ಕೆರ, ಮಹೇಶ್ ಜೈನಿ, ನವೀನ್ ಪೂಜಾರಿ, ಅರುಣ್ ಶೆಟ್ಟಿ, ಸಬಿತಾ, ಶ್ವೇತಾ, ಭರತ್, ಮತ್ತಿತರರ ಮೇಲೆ ಎಫ್‍ಐಆರ್ ದಾಖಲಾಗಿದೆ.

ಕಾಂಗ್ರೆಸ್ ಮುಖಂಡ ಪ್ರಕಾಶ್ ಆಚಾರ್ಯ ನೀಡಿದ್ದ ದೂರಿನ ಹಿನ್ನಲೆ 9 ಬಿಜೆಪಿ ಹಿಂದೂಪರ ಸಂಘಟನೆ ಕಾರ್ಯಕರ್ತರ ಮೇಲೆ ಮಡಿಕೇರಿ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, 9 ಮಂದಿ ಬಿಜೆಪಿ, ಹಿಂದೂಪರ ಸಂಘಟನೆ ಕಾರ್ಯಕರ್ತರು ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button