ರಾಜ್ಯ

ತಳ ಸಮುದಾಯಗಳ ಪರ ಹೋರಾಡಿದ, ಬ್ರಾಹ್ಮಣ್ಯದ ವಿರುದ್ಧ ಬಂಡೆದ್ದ ದಾರ್ಶನಿಕರ ಪಾಠ ಕೈಬಿಟ್ಟಿರುವುದು ಅಕ್ಷಮ್ಯ: ಪಾಪ್ಯುಲರ್ ಫ್ರಂಟ್

ಎಸ್ಸೆಸ್ಸೆಲ್ಸಿ ತರಗತಿಯ ಪಾಠಗಳಲ್ಲಿ ತಳ ಸಮುದಾಯಗಳ ಹಕ್ಕುಗಳ ಪರವಾಗಿ ಹೋರಾಡಿದ ಮತ್ತು
ಜಾತಿ ವ್ಯವಸ್ಥೆಯನ್ನು ಪೋಷಿಸುವ ಬ್ರಾಹ್ಮಣ್ಯದ ವಿರುದ್ಧ ಬಂಡೆದ್ದ ದಾರ್ಶನಿಕರ ಪಾಠ ಕೈಬಿಟ್ಟಿರುವುದು ಅಕ್ಷಮ್ಯ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ ಹೇಳಿದ್ದಾರೆ.

ಕೇರಳದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ಮೇಲ್ಜಾತಿ ಹಿಂದುಗಳು ನಡೆಸುತ್ತಿದ್ದ ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಜನಜಾಗೃತಿಯನ್ನು ಮೂಡಿಸಿ ಅವರ ಹಕ್ಕುಗಳಿಗಾಗಿ ಪ್ರತಿರೋಧ ಚಳವಳಿಯನ್ನು ಹುಟ್ಟು ಹಾಕಿದವರು ನಾರಾಯಣ ಗುರುಗಳಾಗಿದ್ದರು. ಬ್ರಾಹ್ಮಣೇತರ ಸಮುದಾಯಗಳ ಮೇಲೆ ಹೇರಲಾಗಿದ್ದ ಸಾಮಾಜಿಕ ನಿರ್ಬಂಧಗಳು, ಸರ್ಕಾರಿ ರಂಗದಲ್ಲಿ ತಳ ಸಮುದಾಯಗಳ ಪ್ರಾತಿನಿಧ್ಯ ಮತ್ತು ಅವರ ಹಕ್ಕುಗಳಿಗೆ ಹೋರಾಡಿದ ಮತ್ತೊಬ್ಬ ದಾರ್ಶನಿಕರಾಗಿದ್ದವರು ಪೆರಿಯಾರ್. ಸಂಘಪರಿವಾರದ ಶಕ್ತಿಗಳು ಬ್ರಿಟಿಷರೊಂದಿಗೆ ಕೈ ಜೋಡಿಸಿ ದ್ರೋಹ ಬಗೆಯುತ್ತಿದ್ದರೆ, ಭಾರತೀಯರ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದವರು ಭಗತ್ ಸಿಂಗ್. ಇಂತಹ ಸಮಾಜ ಸುಧಾರಕರೂ, ಅವಕಾಶ ವಂಚಿತ ಸಮುದಾಯಗಳ ಹಿತ ಚಿಂತಕರೂ ಮತ್ತು ಸಮತೆಯ ಸಮಾಜ ನಿರ್ಮಾಣ ಹಾಗೂ ಸ್ವಾತಂತ್ರ್ಯದ ಹೋರಾಟದ ಸ್ಫೂರ್ತಿಯನ್ನು ತುಂಬುವ ಆದರ್ಶ ಪುರುಷರ ಪಾಠಗಳನ್ನು ಕೈಬಿಟ್ಟಿರುವುದು ಬಿಜೆಪಿ ಸರಕಾರವು ನಾಡಿನ ಜನತೆಗೆ ಮತ್ತು ಇತಿಹಾಸಕ್ಕೆ ಬಗೆಯುತ್ತಿರುವ ದ್ರೋಹವಾಗಿದೆ.

ಮೇಲ್ವರ್ಗದ ದೌರ್ಜನ್ಯಗಳ ವಿರುದ್ಧ ಸಿಡಿದೆದ್ದ, ನಾಡಿನ ಮೂಲ ನಿವಾಸಿಗಳ ಹಕ್ಕುಗಳನ್ನು ಎತ್ತಿ ಹಿಡಿದ ಕಾರಣಕ್ಕಾಗಿಯೇ ಸಂಘಪರಿವಾರವು ಜನಪರ ಆಡಳಿತಗಾರ, ದೇಶ ಕಂಡ ಅಪ್ರತಿಮ ರಾಜ ಟಿಪ್ಪು ಸುಲ್ತಾನ್ ರನ್ನು ಮತಾಂಧರನ್ನಾಗಿ ಬಿಂಬಿಸುತ್ತಾ ಬಂದಿದೆ. ಆರೆಸ್ಸೆಸ್-ಸಂಘಪರಿವಾರದ ದ್ವೇಷಪೂರಿತ ಸಿದ್ಧಾಂತ ಕೇವಲ ಮುಸ್ಲಿಮರಿಗೆ ಮಾತ್ರವಲ್ಲ, ಈ ದೇಶದ ಬಹುಸಂಖ್ಯಾತ ದಲಿತ ಮತ್ತು ಹಿಂದುಳಿದ ವರ್ಗಗಳಿಗೂ ತೀವ್ರ ಅಪಾಯಕಾರಿಯಾಗಿದೆ ಎಂಬುದನ್ನು ಈ ಸನ್ನಿವೇಶದಿಂದ ನಾವು ಗಮನಿಸಬಹುದಾಗಿದೆ. ಬಿಜೆಪಿ ಸರಕಾರದ ಇಂತಹ ದುಷ್ಟ ಸಂಚುಗಳನ್ನು ನಾಗರಿಕ ಸಮುದಾಯವು ಪ್ರತಿರೋಧಿಸಬೇಕಾಗಿದೆ. ಹಾಗೆಯೇ ಬ್ರಾಹ್ಮಣ್ಯ ಚಿಂತನೆಗಳನ್ನು ಪ್ರಚಾರಪಡಿಸುವ ಹೆಡ್ಗೇವಾರ್ ರಂತಹ ಸಂಘಪರಿವಾರದ ಹಿನ್ನೆಲೆಯ ವ್ಯಕ್ತಿಗಳ ಪಾಠಗಳನ್ನು ಸೇರ್ಪಡೆಗೊಳಿಸಿ ವಿದ್ಯಾರ್ಥಿಗಳಲ್ಲಿ ದ್ವೇಷ ಬಿತ್ತುವ ಷಡ್ಯಂತ್ರಗಳನ್ನೂ ಗಟ್ಟಿ ಧ್ವನಿಯಲ್ಲಿ ವಿರೋಧಿಸಬೇಕಾಗಿದೆ ಎಂದು ಅಯ್ಯೂಬ್ ಅಗ್ನಾಡಿ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button