ತಮಿಳುನಾಡು ಖ್ಯಾತೆಗೆ ಸಿಎಂ ಬೊಮ್ಮಾಯಿ ತಿರುಗೇಟು

ಮೇಕೆದಾಟು ಕುಡಿಯುವ ನದಿನೀರು ಯೋಜನೆ ಸಂಬಂಧ ಇದೇ 17ರಂದು ಕರೆದಿರುವ ಸಭೆಯನ್ನು ನಡೆಸದಂತೆ ತಮಿಳುನಾಡು ಸಿಎಂ ಪ್ರಧಾನಿಗೆ ಬರೆದಿರುವ ಪತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಯ ಮೇಲೆ ತಮಿಳುನಾಡು ಸರ್ಕಾರ ದಬ್ಬಾಳಿಕೆ ನಡೆಸಲು ಹೊರಟಿದೆ.
ನಮ್ಮ ಪಾಲಿನ ನೀರನ್ನು ಬಳಸಿಕೊಂಡರೆ ಇವರಿಗೇನು? ಸಮಸ್ಯೆ ಎಂದು ಖಾರವಾಗಿ ಪ್ರಶ್ನಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ನರೇಂದ್ರಮೋದಿಗೆ ಮೇಕೆದಾಟು ಯೋಜನೆ ಸಭೆಯನ್ನು ನಡೆಸದಂತೆ ಪತ್ರ ಬರೆದಿರುವುದು ಸರಿಯಲ್ಲ. ಇದಕ್ಕೆ ಕಾನೂನಿನಲ್ಲಿ ಯಾವುದೇ ಬೆಲೆಯೂ ಇಲ್ಲ ಎಂದು ತಿರುಗೇಟು ಕೊಟ್ಟರು.
ನಾವು ನಮ್ಮ ಪಾಲಿನ ನೀರು ಬಳಸಿಕೊಂಡು ಕುಡಿಯುವ ನೀರಿನ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. ಈ ಹಿಂದೆ 15 ಸಭೆಗಳು ನಡೆದಾಗ ತಮಿಳುನಾಡು ಸರ್ಕಾರ ಒಪ್ಪಿಗೆ ಸೂಚಿಸಿತ್ತು.
ಅಂದು ವಿರೋಧವನ್ನೇ ವ್ಯಕ್ತಪಡಿಸದೇ ಇರುವಾಗ ಈಗೇಕೆ ತಕರಾರು ಎಂದು ಸಿಎಂ ಪ್ರಶ್ನಿಸಿದರು.ನಾವೇನು ತಮಿಳುನಾಡು ಪಾಲಿನ ನೀರನ್ನು ಬಳಸಿಕೊಂಡು ಯೋಜನೆ ಪ್ರಾರಂಭಿಸುತ್ತಿಲ್ಲ. ನ್ಯಾಯಾೀಧಿಕರಣ ಕರ್ನಾಟಕಕ್ಕೆ ನಿಗದಿಪಡಿಸಿರುವ ನೀರನ್ನೇ ಬಳಸಿಕೊಂಡು ಯೋಜನೆ ಪ್ರಾರಂಭಿಸುತ್ತಿದ್ದೇವೆ.
ಸಭೆಯನ್ನು ನಡೆಸಬಾರದು ಎಂದು ಪ್ರಧಾನಿಗೆ ಪತ್ರ ಬರೆಯುವುದು ಒಕ್ಕೂಟದ ವ್ಯವಸ್ಥೆಗೆ ಮಾಡಿದ ಅವಮಾನ ಎಂದು ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.ಅವರು ಏನು ಪತ್ರ ಬರೆದಿದ್ದಾರೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ.
ಪ್ರಧಾನಿ ಕಚೇರಿಯಿಂದ ಮಾಹಿತಿ ಪಡೆಯಲು ಪ್ರಯತ್ನಿಸುತ್ತೇನೆ. ಏನೇ ಪತ್ರ ಬರೆದರೂ ಇದಕ್ಕೆ ಕಾನೂನಿನ ಮಾನ್ಯತೆ ಸಿಗುವುದಿಲ್ಲ.
ಪ್ರಧಾನಿ ನರೇಂದ್ರಮೋದಿ ಅವರು ಇದಕ್ಕೆ ಸ್ಪಂದಿಸುವ ಸಾಧ್ಯತೆ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಈ ಹಿಂದೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯೇ ವಿಸ್ತೃತ ಯೋಜನಾ ವರದಿ(ಡಿಪಿಆರ್)ಯನ್ನು ಸಿದ್ಧಪಡಿಸಲು ಸೂಚಿಸಿತ್ತು.
ಅದರಂತೆ ನಮ್ಮ ಸರ್ಕಾರ ಡಿಪಿಆರ್ ಸಿದ್ದಪಡಿಸಿ ಒಪ್ಪಿಗೆಯನ್ನು ಪಡೆದುಕೊಂಡಿದೆ. ಏಕಾಏಕಿ ಸಭೆಯನ್ನೇ ನಡೆಸದಂತೆ ಒತ್ತಡ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.ತಮಿಳುನಾಡು ಸರ್ಕಾರ ಕಾವೇರಿಯ ಪ್ರತಿಯೊಂದು ವಿಷಯದಲ್ಲೂ ಕ್ಯಾತೆ ತೆಗೆಯುವುದು ಸಾಮಾನ್ಯವಾಗಿಬಿಟ್ಟಿದೆ.
ಅವರಿಗೆ ಕಾವೇರಿ ವಿಷಯದಲ್ಲಿ ರಾಜಕಾರಣ ಮಾಡುವುದು ಹುಟ್ಟುಗುಣ. ಇದು ಕೂಡ ಒಂದು ಪೊಲಿಟಿಕಲ್ ಸ್ಟಂಟ್ ಎಂದು ವ್ಯಂಗ್ಯವಾಡಿದರು.ತಮಿಳುನಾಡು ಸರ್ಕಾರ ಪ್ರಧಾನಿಗೆ ಪತ್ರ ಬರೆದಿರುವುದೇ ಕಾನೂನು ಬಾಹಿರ. ಈ ಹಿಂದೆ ನಡೆದ ಅಧಿಕಾರಿಗಳ ಸಭೆಯಲ್ಲೂ ನಮಗೆ ಅನುಮತಿ ಸಿಕ್ಕಿದೆ. ಇವರು ಹೇಳಿದ ರೀತಿ ನಾವು ಕೇಳಲು ಸಾಧ್ಯವಿಲ್ಲ ಎಂದು ತಿರುಗೇಟು ಕೊಟ್ಟರು.
17ರಂದು ನಡೆಯುವ ಸಭೆಗೆ ರಾಜ್ಯದ ಪರವಾಗಿ ಅಧಿಕಾರಿಗಳು ಭಾಗವಹಿಸುತ್ತಾರೆ.ಕಾವೇರಿ ಜಲಾನಯನದ ತಮಿಳುನಾಡು, ಕೇರಳ, ಪಾಂಡಿಚೇರಿ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಕೇಂದ್ರ ಜಲಸಚಿವರು ಕೂಡ ತಮಿಳುನಾಡಿನ ಆಕ್ಷೇಪಕ್ಕೆ ಕವಡೆ ಕಾಸಿನ ಬೆಲೆ ಕೊಟ್ಟಿಲ್ಲ.
ಆದರೂ ಪದೇ ಪದೇ ಈ ರೀತಿ ಕ್ಯಾತೆ ತೆಗೆಯುವುದು ಅವರಿಗೆ ಚಾಳಿಯಾಗಿದೆ. ನಮ್ಮ ಸರ್ಕಾರ ಇದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ ಎಂದರು.