
ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ವರುಣ ಅಬ್ಬರಿಸಿದ್ದಾನೆ. ಭಾರಿ ಮಳೆಯಿಂದ ರಸ್ತೆಗಳು, ತಗ್ಗಿನ ಪ್ರದೇಶಗಳು ಜಲಾವೃತಗೊಂಡಿದ್ದು, ವಿಪರೀತ ಸಂಚಾರ ದಟ್ಟಣೆ ಉಂಟಾಗಿದೆ. ಸೋಮವಾರ ರಾತ್ರಿಯಿಂದ ಬೆಳಗಿನವರೆಗೂ ಭಾರಿ ಮಳೆ ಸುರಿದಿದೆ. ಮಂಗಳವಾರದ ಉಳಿದ ಅವಧಿ ಹಾಗೂ ಮುಂಬರುವ ಕೆಲವು ದಿನಗಳವರೆಗೂ ಮತ್ತಷ್ಟು ಮಳೆ ಸುರಿಯುವ ನಿರೀಕ್ಷೆ ಇದೆ.
ಅಕ್ಟೋಬರ್ 29ರಂದು ಈಶಾನ್ಯ ಮುಂಗಾರು ಆರಂಭವಾಗಿದ್ದು, ನವೆಂಬರ್ 4ರವರೆಗೂ ವಿವಿಧ ಸ್ಥಳಗಳಲ್ಲಿ ಗುಡುಗು, ಸಿಡಿಲು ಸಹಿತ ಜೋರು ಮಳೆಯಾಗಲಿದೆ ಎಂದು ಚೆನ್ನೈನಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರ ಪ್ರಕಟಿಸಿದೆ. ಶ್ರೀಲಂಕಾ ಸಮೀಪ ಸೃಷ್ಟಿಯಾಗಿರುವ ಚಂಡಮಾರುತ ಸನ್ನಿವೇಶ ಇದಕ್ಕೆ ಕಾರಣ ಎಂದ ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈನ ಅನೇಕ ಭಾಗಗಳಲ್ಲಿ ಸೋಮವಾರ ಭಾರಿ ಮಳೆಯಾಗಿದೆ. ಇದರಿಂದ ನಗರ ಪ್ರದೇಶ ಮಳೆ ನೀರಿನಲ್ಲಿ ಮುಳುಗಿದೆ. ಪುಲಿಯಂತೋಪೆ, ಚೂಳೈ ಪ್ರದೇಶಗಳಲ್ಲಿ ನಿವಾಸಿಗಳು ಮೊಣಕಾಲೆತ್ತರ ನೀರು ನಿಂತ ರಸ್ತೆಗಳಲ್ಲಿ ನಡೆದು ಸಾಗುವುದು ವಿಡಿಯೋಗಳಲ್ಲಿ ಸೆರೆಯಾಗಿದೆ.
ಹೃದಯಭಾಗ ಅಣ್ಣಾ ಸಲೈನಲ್ಲಿ, ಹಾಗೂ ಅದಕ್ಕೆ ಸಂಪರ್ಕಿಸುವ ಕೆಲವು ರಸ್ತೆಗಳಲ್ಲಿ ಕೂಡ ನೀರು ತುಂಬಿದ್ದು, ವಿಪರೀತ ವಾಹನ ದಟ್ಟಣೆ ಉಂಟಾಗಿದೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಜಲಾವೃತವಾಗದ ಹಾಗೂ ವಾಹನ ಸಂಚಾರಕ್ಕೆ ಮುಕ್ತವಾಗಿರುವ ರಸ್ತೆಗಳು, ಸಬ್‌ವೇಗಳ ವಿವರಗಳನ್ನು ಚೆನ್ನೈ ಮಹಾನಗರ ಪಾಲಿಕೆ ಬಿಡುಗಡೆ ಮಾಡಿದೆ.
ಶಾಲೆಗಳು ಬಂದ್
ಭಾರಿ ಮಳೆಯ ಕಾರಣ ಚೆನ್ನೈನಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ. ಕಾಂಚೀಪುರಂ, ತಿರುವಳ್ಳೂರ್, ಚೆಂಗಲ್‌ಪೇಟೆ, ನಾಗಪಟ್ಟಿಣಂ, ತಂಜಾವೂರ್ ಮತ್ತು ತಿರುವರೂರ್ ಜಿಲ್ಲೆಗಳಲ್ಲಿಯೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಅಕ್ಟೋಬರ್ 31ರಿಂದ ಚೆನ್ನೈ ಸುಮಾರು 20 ಸೆಂ.ಮೀ ಮಳೆ ಕಂಡಿದೆ. ರೆಡ್ ಹಿಲ್ಸ್‌ನಲ್ಲಿ ಅತ್ಯಧಿಕ ಮಳೆಯಾಗಿದ್ದು, 13 ಸೆಂಮೀ ಮಳೆ ದಾಖಲಾಗಿದೆ. ಪೆರಂಬೂರ್‌ನಲ್ಲಿ 12 ಸೆಂಮೀ, ನುಂಗಂಬಕ್ಕಂನಲ್ಲಿ 8 ಸೆಂಮೀ ಮಳೆಯಾಗಿದೆ. ಇದು ಕಳೆದ 30 ವರ್ಷಗಳಲ್ಲಿ ನ. 1ರಂದು ಸುರಿದ ಅತ್ಯಧಿಕ ಮಳೆಯಾಗಿದೆ.
