
ರಾತ್ರಿ ವೇಳೆ ಮನೆಗೆ ಕನ್ನ ಹಾಕುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಬಂದು ಈ ವ್ಯಕ್ತಿ ಕಳ್ಳತನಕ್ಕೆ ಇಳಿದಿದ್ದ. ಇದೀಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡು, ಜೈಲುವಾಸ ಅನುಭವಿಸುತ್ತಿದ್ದಾನೆ. ಇದೆಲ್ಲದರ ಮಧ್ಯೆ ಈ ವ್ಯಕ್ತಿ ಕಳ್ಳನಾದ ಕಥೆಯೇ ರೋಚಕವಾಗಿದೆ.
ಮೊಹಮದ್ ಸಾದಿಕ್ (31) ಎಂಬ ಕಳ್ಳನನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. 18 ವರ್ಷಗಳ ಹಿಂದೆ ಸಾದಿಕ್ ತಂದೆ ತಾಯಿ ತೀರಿಕೊಂಡಿದ್ರು. ಆಗ ಮಂಗಳೂರಿನಿಂದ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಮೊಹಮದ್ ಬಂದಿದ್ದ. ಸಿಟಿ ಮಾರ್ಕೆಟ್‌ನ ನಂದಿನಿ ಹೋಟೆಲ್‌ನಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿದ್ದ. ಹೋಟೆಲ್‌ಗೆ ಬರುವ ಹೈ ಫೈ ಜನರನ್ನು ನೋಡಿ ತಾನೂ ಹಾಗೆ ಆಗಬೇಕು ಅಂತ ಆಸೆಪಟ್ಟಿದ್ದ. ಐಷಾರಾಮಿ ಜೀವನ ನಡೆಸಲೆಂದೇ ರಾತ್ರಿ ವೇಳೆ ಮನೆಕಳ್ಳತನ ಮಾಡಲು ಶುರು ಮಾಡಿದ್ದ.
ಮೊದಲಿಗೆ ಒಂದೆರಡು ಮನೆಗಳನ್ನು ಯಶಸ್ವಿಯಾಗಿ ಕಳುವು ಮಾಡಿದ್ದ. ಇದುವರೆಗೂ ಮೊಹಮದ್ ಸಾದಿಕ್ ನಾಲ್ಕೈದು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. ಕುಮಾರಸ್ವಾಮಿ ಲೇ ಔಟ್, ಕೆ.ಆರ್ ಮಾರುಕಟ್ಟೆ, ಬನಶಂಕರಿ ಹಾಗೂ ಬಸವನಗುಡಿ ಪೊಲೀಸರಿಂದ ಈ ಹಿಂದೆ ಬಂಧಿಸಲ್ಪಟ್ಟಿದೆ. ಈಗ ಮತ್ತೆ ಬಸವನಗುಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಎರಡು ದಿನಗಳ ಹಿಂದೆ ರೆಜೆನ್ಸಿ ಅಪಾರ್ಟ್ಮೆಂಟ್ ನ ಫ್ಲಾಟ್ ನಲ್ಲಿ ಕಳ್ಳತನ ನಡೆದಿತ್ತು. ಕಿಟಕಿ ಮೂಲಕ ಕೈ ಹಾಕಿ ಲಾಕ್ ತೆಗೆದು ಫ್ಲಾಟ್ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮದ್‌ನನ್ನು ಬಂಧಿಸಿದ್ದಾರೆ. 18 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ದೋಚಿ ಎಸ್ಕೇಪ್ ಆಗಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.