ಡಿಜಿಟಲ್ ಆರೋಗ್ಯ ಸೇವೆ ಕ್ರಾಂತಿಕಾರಕ ಬದಲಾವಣೆಗೆ ರಹದಾರಿ

ದೇಶದ ಕಟ್ಟಕಡೆಯ ವ್ಯಕ್ತಿಗೂ ಸಮರ್ಪಕ ಆರೋಗ್ಯ ಸೇವೆ ನೀಡುವ ಗುರಿಯುಳ್ಳ ‘ಆಯುಷ್ಮಾನ್ ಭಾರತ ಡಿಜಿಟಲ್ ಮಿಶನ್’ (ಎಬಿಡಿಎಂ) ಕಾರ್ಯಕ್ರಮ ಜಾಗತಿಕ ಮಟ್ಟದ ಅತ್ಯಂತ ದೊಡ್ಡ ಉಪಕ್ರಮವಾಗಿದೆ.
ಇದು ಆರೋಗ್ಯ ಕ್ಷೇತ್ರದಲ್ಲಿರುವ ಕಂದಕಗಳನ್ನು ಮುಚ್ಚಿ, ಸುಸ್ಥಿರ ಮಾದರಿ ಆರೋಗ್ಯ ವ್ಯವಸ್ಥೆಯನ್ನು ಸೃಷ್ಟಿಸಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಾಸ್ಕಾಂನಲ್ಲಿ ಏರ್ಪಡಿಸಿದ್ದ ‘ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್’ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬೆಂಗಳೂರೊಂದರಲ್ಲೇ ಆರೋಗ್ಯ ಕ್ಷೇತ್ರಕ್ಕೆ ಸಂಬಂಧೀಸಿದ ೭,೫೦೦ ನವೋದ್ಯಮಗಳಿವೆ.
ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕ ಮುಂಚೂಣಿ ರಾಜ್ಯವಾಗಿದೆ’ ಎಂದರು.ರಾಜ್ಯದ ಆರೋಗ್ಯ ಸೇವೆಗಳ ಮಾಹಿತಿ, ಮಾನವ ಸಂಪನ್ಮೂಲ ವ್ಯವಸ್ಥೆ ಸಹಿತ ಆರೋಗ್ಯ ವಲಯದ ಸಮಗ್ರ ಮಾಹಿತಿಗಳನ್ನು ಕ್ರೋಡೀಕರಿಸಲಾಗುತ್ತಿದೆ.
ಆ ಮೂಲಕ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ. ಇದಕ್ಕೆ ಪೂರಕವಾಗಿ ಆಂಬುಲೆನ್ಸ್ ಸೇವೆಯನ್ನು ಇನ್ನೊಂದು ತಿಂಗಳಲ್ಲಿ ಸಮಗ್ರವಾಗಿ ಬದಲಾಯಿಸಲಾಗುತ್ತಿದೆ. ರೋಗಿಗಳನ್ನು ಯಾವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂಬ ಮಾಹಿತಿಯನ್ನು ಆಂಬುಲೆನ್ಸ್ ಚಾಲಕರಿಗೆ ಟೆಲಿಕಾಲ್ ಮೂಲಕ ಒದಗಿಸಲಾಗುವುದು.
ಇದರಿಂದ ವಿಂಳಂಬವಿಲ್ಲದೆ ಅಗತ್ಯವಿರುವ ಚಿಕಿತ್ಸೆ ದೊರಕಿಸಲು ಸಾಧ್ಯ’ ಎಂದರು.ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆಯಡಿ ಪ್ರತಿಯೊಬ್ಬ ಅರ್ಹರಿಗೂ ಒಂದು ಗುರುತಿನ ಸಂಖ್ಯೆ ನೀಡಲಾಗುವುದು. ಜತೆಗೆ, ಸರ್ಜನ್ ಮಟ್ಟದ ಪರಿಣತ ವೈದ್ಯರಿಂದ ಹಿಡಿದು ಸಾಮಾನ್ಯ ವೈದ್ಯರವರೆಗೂ ಸಮಗ್ರ ದತ್ತಾಂಶ ಸಂಗ್ರಹಿಸಲಾಗುವುದು.
ಈ ಮೂಲಕ, ಆರೋಗ್ಯ ಕ್ಷೇತ್ರವನ್ನು ಕಾಡುತ್ತಿರುವ ನಕಲಿ ವೈದ್ಯರ ಸಮಸ್ಯೆಗೂ ತೆರೆ ಬೀಳಲಿದೆ ಎಂದು ಅವರು ನುಡಿದರು.ಕೊರೋನಾ ನಂತರ, ಆರೋಗ್ಯ ಕ್ಷೇತ್ರದ ಚಹರೆಗಳೇ ಬದಲಾಗಿವೆ. ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಇ-ಮಾನಸ್ ವ್ಯವಸ್ಥೆಯ ಮೂಲಕ ೨೫ ಲಕ್ಷಕ್ಕೂ ಹೆಚ್ಚು ಜನರಿಗೆ ಕೌನ್ಸೆಲಿಂಗ್ ನೆರವು ಒದಗಿಸಲಾಗಿದೆ. ಇದನ್ನು ಕೇಂದ್ರ ಸರಕಾರ ಕೂಡ ಶ್ಲಾಘಿಸಿ, ಇತರೆ ರಾಜ್ಯಗಳಿಗೂ ಯೋಜನೆ ವಿಸ್ತರಿಸುವ ನಿರ್ಣಯವನ್ನು ಕೈಗೊಂಡಿದೆ.
ಹಾಗೆಯೇ ಟೆಲಿ ಐಸಿಯು, ಟೆಲಿ ಮೆಡಿಸನ್ ನಂತಹ ಕ್ರಮಗಳ ಮೂಲಕ ರಾಜ್ಯದ ಎಲ್ಲಾ ಭಾಗಗಳ ರೋಗಿಗಳಿಗೆ ಏಕರೂಪದ ಗುಣಮಟ್ಟದ ಚಿಕಿತ್ಸೆ ನೀಡಲಾಯಿತು ಎಂದು ವಿವರಿಸಿದರು. ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಖಾಸಗಿ ಆಸ್ಪತ್ರೆಗಳ ಪಾತ್ರವೂ ಮಹತ್ವದ್ದಾಗಿದೆ. ದೇಶದಲ್ಲಿ ಶೇಕಡ ೫೦ಕ್ಕಿಂತಲೂ ಹೆಚ್ಚಿನ ಜನರು ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಎಲ್ಲ ಮಾಹಿತಿಗಳನ್ನೂ ತೆಗೆದುಕೊಳ್ಳುತ್ತವೆ. ಆ ಮಾಹಿತಿಯನ್ನು ಸರಕಾರಗಳೊಂದಿಗೆ ಹಂಚಿಕೊಳ್ಳುತ್ತಿಲ್ಲ. ಈ ಮನೋಭಾವ ಬದಲಾಗಬೇಕು ಎಂದರು.ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿನ ರೋಗಿಗಳ ಮಾಹಿತಿ ಹಂಚಿಕೊಂಡರೆ, ಸುಗಮ ಆರೋಗ್ಯ ಸೇವೆ ಒದಗಿಸಲು ಬೇಕಾಗಿರುವ ಸೂಕ್ತ ವ್ಯವಸ್ಥೆಯನ್ನು ರೂಪಿಸಬಹುದು.
ಈ ನಿಟ್ಟಿನಲ್ಲಿ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಕಾರ್ಯಕ್ರಮದ ಭಾಗವಾಗಿ ಖಾಸಗಿ ಆಸ್ಪತ್ರೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳುವುದು ಅವಶ್ಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಾಸ್ಕಾಂ ಮುಖ್ಯಸ್ಥೆ ದೇಬಜಾನಿ ಘೋಷ್, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ.ಆರ್.ಎಸ್. ಶರ್ಮಾ, ಉಪಾಧ್ಯಕ್ಷ ಡಾ.ಪ್ರವೀಣ್ ಖೇತಂ, ರಾಜ್ಯ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್, ಆಯಕ್ತರಾದ ರಂದೀಪ್ ಮುಂತಾದವರು ಉಪಸ್ಥಿತರಿದ್ದರು.