
ಕನ್ನಡಿಗರ ಹೃದಯಗಳನ್ನು ಗೆದ್ದ ನಟ ಡಾ. ವಿಷ್ಣುವರ್ಧನ್ ನಮ್ಮನ್ನು ಅಗಲಿ ಇಂದಿಗೆ 13 ವರ್ಷ ಕಳೆದಿದೆ. ಪುಣ್ಯಸ್ಮರಣೆ ದಿನವಾದ ಇಂದು ರಾಜ್ಯದ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳು ಅಭಿಮಾನಿ ಸ್ಟುಡಿಯೋದ ಅವರ ಸಮಾಗೆ ನಮನ ಸಲ್ಲಿಸಿದ್ದಾರೆ.
ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಸದಸ್ಯರು ಬನಶಂಕರಿ ದೇವಸ್ಥಾನದಿಂದ ಅಭಿಮಾನಿ ಸ್ಟುಡಿಯೋವರೆಗೆ ಸುಮಾರು ಹದಿನೈದು ಕಿಲೋಮೀಟರ್ ಪಾದಯಾತ್ರೆ ಮೂಲಕ ಪುಣ್ಯಭೂಮಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
ಐವತ್ತಕ್ಕೂ ಹೆಚ್ಚು ಅಭಿಮಾನಿಗಳು ಅಭಿಮಾನಿ ಸ್ಟುಡಿಯೋವರೆಗೂ ಮೈಸೂರಿನಿಂದ ಪಾದಯಾತ್ರೆ ಕೈಗೊಂಡು ವಿಷ್ಣು ಸಮಾಗೆ ಪೂಜೆ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲದೆ ರಾಜ್ಯದ ಮೂಲೆ ಮೂಲೆಗಳಲ್ಲಿ ಅನ್ನದಾನ ರಕ್ತದಾನಗಳಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಷ್ಣುವರ್ಧನ್ ಅವರನ್ನು ಸ್ಮರಿಸಿದ್ದಾರೆ.
ಡಾ. ವಿಷ್ಣುವರ್ಧನ್ ಮತ್ತು ಕುಚುಕು ಗೆಳೆಯ ಡಾ. ಅಂಬರೀಶ್ ಇಬ್ಬರಿಗೂ ಹೆಸರು ಮತ್ತು ಕೀರ್ತಿ ತಂದುಕೊಟ್ಟು ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದ ನಾಗರಹಾವು ಚಿತ್ರ ಬಿಡುಗಡೆಯಾಗಿ ಇಂದಿಗೆ ಐವತ್ತು ವರ್ಷಗಳೇ ಕಳೆದಿವೆ.
ಇವರಿಬ್ಬರ ಸ್ಮರಣೆಗಾಗಿಯೂ ಬೆಂಗಳೂರಿನ ಶ್ರೀನಿವಾಸ್ ಥಿಯೇಟರ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಇಂದು ಬೆಳಗ್ಗೆ 7:30ರಿಂದ ಸಿನಿಮಾ ಪ್ರದರ್ಶನವಾಗುತ್ತಿದೆ.
ಡಾ. ರಾಜಕುಮಾರ್ ನಂತರ ಎಲ್ಲಾ ರೀತಿಯ ಪಾತ್ರಗಳಿಗೆ ಕೈಹಾಕಿ ಯಶಸ್ಸನ್ನು ಕಂಡವರು ವಿಷ್ಣುವರ್ಧನ್ ಅವರು. ಬರಿ ಅಭಿನಯವಷ್ಟೇ ಅಲ್ಲದೆ ನಿಜ ಜೀವನದಲ್ಲೂ ಕರುಣನಾಗಿ, ಸ್ನೇಹಕ್ಕೆ ಆಪ್ತಮಿತ್ರನಂತೆ, ಕನ್ನಡಾಂಬೆಗೆ ಮುತ್ತಿನ ಹಾರ ಹಾಕಿ, ಕೊನೆಯವರೆಗೂ ಅಭಿನಯದಲ್ಲಿ ದಿಗ್ಗಜನಾಗಿ ಮೆರೆದ ಆಪ್ತರಕ್ಷಕ ಇನ್ನೂ ಇರಬೇಕಿತ್ತು ಎನ್ನುವ ಉದ್ಘಾರ ಪ್ರತಿಯೊಬ್ಬ ಕನ್ನಡಿಗನಲ್ಲೂ ಬರುತ್ತದೆ.
ಏಳು ರಾಜ್ಯ ಪ್ರಶಸ್ತಿಗಳು, ಆರು ಫಿಲಂಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ.
ಪ್ರತಿ ವರ್ಷವೂ ಇವರ ಪುಣ್ಯ ಸ್ಮರಣೆಯನ್ನು ಅಭಿಮಾನಿಗಳು ಅಭಿಮಾನಿ ಸ್ಟುಡಿಯೋಗೆ ಹೋಗಿ ಪೂಜೆ ಸಲ್ಲಿಸುವ ಮೂಲಕ ಸ್ಮರಿಸುತ್ತಾರೆ.