ಡಾ. ರಾಜಕುಮಾರ್ ಅವರ 94ನೇ ಹುಟ್ಟುಹಬ್ಬ

ಇಂದು ಡಾ. ರಾಜಕುಮಾರ್ ಅವರ 94ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಹಿರಿಯ ನಟ-ನಿರ್ದೇಶಕ ಸಿ.ವಿ. ಶಿವಶಂಕರ್, ರಾಜಕುಮಾರ್ ಅವರೊಂದಿಗಿನ ಒಡನಾಟ ಮತ್ತು ಅವರ ಸ್ವಭಾವದ ಕುರಿತು ವಿಶೇಷವಾಗಿ ಲೇಖನ ಬರೆದಿದ್ದಾರೆ.
ಕನ್ನಡ ರಂಗಭೂಮಿಯ ಅಭಿಜಾತ ಕಲಾವಿದ ದಿ.ಸುಬ್ಬಯ್ಯ ನಾಯ್ಡುರವರ ಸಾಹಿತ್ಯ ಸಾಮ್ರಾಜ್ಯ ನಾಟಕ ಕಂಪನಿಯ ನಟ ಮುತ್ತುರಾಜ್ರವರು ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ನಾಯಕ ನಟರಾಗಿ ಆಯ್ಕೆ ಆದಾಗ, ಮದರಾಸಿಗೆ (ಇಂದಿನ ಚೆನ್ನೈ) ಮೇಕಪ್ ಟೆಸ್ಟ್ಗೆ ಹೋಗಲು ರೈಲಿನಲ್ಲೇ ಪ್ರಯಾಣ ಮಾಡಿದ್ದರು. ಕಥಾನಾಯಕನಾಗಿ ಆಯ್ಕೆ ಆದಾಗ ಕರ್ನಾಟಕ ಫಿಲಂಸ್ ಆಫೀಸಿಗೆ ಹೋಗಿ ಬಸವರಾಜಪ್ಪನವರೆಂಬ ಹಿರಿಯರನ್ನು ಕಂಡು ಅವರಿಗೆ ಧನ್ಯವಾದವನ್ನು ಅರ್ಪಿಸಿ ಮದರಾಸಿಗೆ ಹೋಗಲು ರೈಲಿನಲ್ಲಿ ಪ್ರಯಾಣ ಮಾಡಿ, ಕೋಡಂಬಾಕ್ಕಂನಲ್ಲಿದ್ದ ಕರ್ನಾಟಕ ಫಿಲಂಸ್ ಪ್ರೊಡಕ್ಷನ್ ಆಫೀಸಿಗೆ ಹೋಗಿ ‘ಬೇಡರ ಕಣ್ಣಪ್ಪ’ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಎ.ವಿ.ಎಂ ಸ್ಟುಡಿಯೋಗೆ ಹೋಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಹೀಗೆ ಮೊದಲ ಹಂತದ ಚಿತ್ರೀಕರಣ ಮುಗಿಯಿತು.
ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲು ಪುನಃ ಅವರು ಮದರಾಸಿಗೆ ಹೊರಟು ನಿಂತಾಗ, ರಾತ್ರಿ ರೈಲಿನಲ್ಲಿ ಸ್ಥಳವೇ ಇರಲಿಲ್ಲ. ಕುಳಿತುಕೊಳ್ಳುವುದಿರಲಿ, ನಿಲ್ಲಲೂ ಸ್ಥಳವಿರಲಿಲ್ಲ. ಆಗ ರಾಜಕುಮಾರರನ್ನು ಸಿನಿಮಾ ನಟರೆಂದು ಗುರುತಿಸುವ ಜನರೂ ಅಲ್ಲಿ ಯಾರೂ ಇರಲಿಲ್ಲ. ಅದೇ ರೈಲಿನಲ್ಲಿ ನಾನು ಮದರಾಸಿಗೆ ಹೊರಟಿದ್ದೆ. ಜನರ ಗುಂಪಿನ ಮಧ್ಯೆ ಮುತ್ತುರಾಜರು ನಿಂತಿರುವುದನ್ನು ನೋಡಿ, ಒಂದು ಸಲಹೆ ಕೊಟ್ಟೆ. ಸೀಟಿನ ಕೆಳಗೆ ಪತ್ರಿಕೆಯನ್ನು ಹಾಸಿಕೊಂಡು ಮಲಗೋಣ ಎಂದೆ.
ಅವರು ಒಪ್ಪಿ, ಎದುರಿನ ಸೀಟಿನ ಕೆಳಗೆ ಮಲಗಿದರು. ಅಂದು ಅವರು ಒಂದು ಮಾತು ಹೇಳಿದರು. ‘ಒಮ್ಮೆ ತಂದೆಯವರ ಜತೆಯಲ್ಲಿ ಮದರಾಸಿಗೆ ಬಂದಿದ್ದೆ. ಕುಳಿತುಕೊಳ್ಳಲು ಸೀಟು ಸಿಕ್ಕಿತ್ತು. ಅಂದು ತಂದೆಯವರು ಒಂದು ಮಾತು ಹೇಳಿದ್ದರು. ನೀನು ಹೇಗಾದರೂ ಸಿನಿಮಾ ನಟನಾಗಬೇಕು, ಅದನ್ನು ನಾನು ನೋಡಿ ಸಂತೋಷಪಡಬೇಕು ಎಂದು ಹೇಳಿದ್ದರು. ಇಂದು ನನಗೆ ಕಥಾನಾಯಕನಾಗುವ ಅವಕಾಶ ಸಿಕ್ಕಿದೆ. ಆದರೆ, ಇಂದು ನಮ್ಮ ತಂದೆಯವರೇ ಇಲ್ಲ. ಅವರ ಆಸೆಯಂತೆ ನಾನು ಪರದೆಯ ಮೇಲೆ ಕಾಣಿಸಿಕೊಂಡರೆ ನಮ್ಮ ಸಂಬಂಧಿಕರು, ಗೆಳೆಯರು, ನನ್ನ ತಾಯಿ ಎಲ್ಲರೂ ನಮ್ಮ ಮುತ್ತುರಾಜ ಸಿನಿಮಾ ನಟನಾದ ಎಂದು ಹೆಮ್ಮೆ ಪಡುತ್ತಾರೆ’ ಎಂದು ಹೇಳುತ್ತಾ ನಿದ್ರೆಗೆ ಜಾರಿದರು. ಬೆಳಿಗ್ಗೆ ಕಣ್ಣ ಬಿಟ್ಟಾಗ ರೈಲು ಮದರಾಸಿನ ಸೆಂಟ್ರಲ್ ನಿಲ್ದಾಣದಲ್ಲಿ ನಿಂತಿತ್ತು.
ನಂತರ ಚಿತ್ರದ ಬಿಡುಗಡೆ ಸಮೀಪಿಸುತ್ತಿದ್ದಂತೆ, ಮುತ್ತುರಾಜರ ಹೆಸರನ್ನು ರಾಜಕುಮಾರ್ ಎಂದು ಬದಲಾಯಿಸಿದ್ದಾರೆ ನಿರ್ದೇಶಕ ಎಚ್.ಎಲ್.ಎನ್. ಸಿಂಹ. ಹೆಸರು ಬದಲಾಯಿಸಬೇಡಿ, ಅದೇ ಹೆಸರು ಇರಲಿ ಬಿಡಿ ಎಂದು ಮನವಿ ಮಾಡಿಕೊಂಡರಂತೆ ಮುತ್ತುರಾಜು. ಹೆಸರು ಬದಲಾದರೆ, ಬಂಧು ಬಳಗದವರಿಗೆ ಗೊಂದಲವಾಗುತ್ತದೆ, ಮುತ್ತುರಾಜನನ್ನು ಬಿಟ್ಟು ಯಾರೋ ರಾಜಕುಮಾರ ಎಂಬುವವನನ್ನು ಹೀರೋ ಮಾಡಿದ್ದಾರೆ ಎಂದು ತಪ್ಪಾಗಿ ತಿಳಿಯುತ್ತಾರೆ ಎಂದು ಹೇಳಿದರಂತೆ. ಆಗ ನಿರ್ದೇಶಕರು, ‘ನೋಡು ಮುತ್ತುರಾಜು, ನಿಮ್ಮ ತಂದೆಯವರೇ ನನ್ನ ಮಗ ರಾಜಕುಮಾರ ಇದ್ದ ಹಾಗೆ ಇದ್ದಾನೆ ಎನ್ನುತ್ತಿದ್ದರು. ಅಲ್ಲದೆ, ಎ.ವಿ.ಎಮ್ ಚೆಟ್ಟಿಯಾರರು ಈ ಮುತ್ತುರಾಜನಿಗೆ ರಾಜಕುಮಾರ್ ಹೆಸರೇ ಚೆನ್ನಾಗಿ ಒಪುಪತ್ತದೆ ಎಂದು ಹೇಳಿದ್ದಾರೆ. ನಿನ್ನ ಭವಿಷ್ಯ ಉಜ್ವಲವಾಗಲಿದೆ’ ಎಂದು ಹೇಳಿದರು.
ಅಂದು ಸಿಂಹ ಅವರು ಮುತ್ತುರಾಜು ಎಂಬ ಹೆಸರನ್ನು ಬದಲಾಯಿಸಿದರೂ ರಾಜಕುಮಾರ್, ಮುತ್ತುರಾಜ್ ಆಗಿಯೇ ಜೀವನ ಪೂರ್ತಿ ವಿನಯ ವಿಧೇಯತೆಗಳ ಮೂರ್ತಿಯಾಗಿ ಮೆರೆದರು.