ಬೆಂಗಳೂರು

ಟ್ರಾಫಿಕ್ ಸಂಕಷ್ಟ: ಸಾರಕ್ಕಿ, ಇಬ್ಬಲೂರು, ಸಿಲ್ಕ್ ಬೋರ್ಡ್‌ ಜಂಕ್ಷನ್‌ಗಳಲ್ಲಿ ಬಿಬಿಎಂಪಿ ತಪಾಸಣೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಸಾರಕ್ಕಿ, ಜಯದೇವ, ಸಿಲ್ಕ್ ಬೋರ್ಡ್‌ ಮತ್ತು ಇಬ್ಬಲೂರು ಜಂಕ್ಷನ್‌ಗಳಿಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಹಾಗೂ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮಂಗಳವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಂಧೂರ ಕಲ್ಯಾಣ ಮಂಟಪ ಕಡೆಯಿಂದ ಸಾರಕ್ಕಿ ಜಂಕ್ಷನ್‌ ಕಡೆಗಿನ ರಸ್ತೆಯಲ್ಲಿ ಪಾಲಿಕೆ ವತಿಯಿಂದ ಅಳವಡಿಸಿರುವ ರಸ್ತೆ ನಾಮ ಫಲಕ, ಬೆಸ್ಕಾಂನಿಂದ ಹಾಕಿರುವ ಕಾಂಕ್ರೀಟ್‌ ಹಾಗೂ ಜೀರೋ ಟಾಲರೆನ್ಸ್‌ ಫಲಕವನ್ನು ಸ್ಥಳಾಂತರಿಸಿ ಪಾದಚಾರಿ ಮಾರ್ಗವನ್ನು ದುರಸ್ತಿಪಡಿಸಬೇಕು. ಆ ಮೂಲಕ ಎಡ ಭಾಗಕ್ಕೆ ತೆರಳುವ ವಾಹನಗಳು ಸುಗಮವಾಗಿ ಸಂಚರಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ಬಿಎಂಆರ್‌ಸಿಎಲ್‌ನ ಪಿಲ್ಲರ್‌ಗೆ ಅಳವಡಿಸಿರುವ ಸಿಗ್ನಲ್‌ ದೀಪವನ್ನು ಇನ್ನೂ 3 ಅಡಿಯಷ್ಟು ಎತ್ತರಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಾರಕ್ಕಿ ಸಿಗ್ನಲ್‌ನಲ್ಲಿನ ಮೆಟ್ರೋ ನಿಲ್ದಾಣದ 14ನೇ ‘ಇ’ ರಸ್ತೆಯಿಂದ ವಾಹನಗಳು ಪಾದಚಾರಿ ಮಾರ್ಗವಾಗಿ ಕನಕಪುರ ರಸ್ತೆಗೆ ವೇಗವಾಗಿ ಬರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ, 14ನೇ ‘ಇ’ ಅಡ್ಡರಸ್ತೆ, ಕನಕಪುರ ಮುಖ್ಯ ರಸ್ತೆ ಮಧ್ಯದಲ್ಲಿನ ಪಾದಚಾರಿ ಮಾರ್ಗಕ್ಕೆ ಗ್ರಿಲ್‌ಗಳನ್ನು ಅಳವಡಿಸಬೇಕು’ ಎಂದು ನಿರ್ದೇಶನ ನೀಡಿದರು.

ಸಾರಕ್ಕಿಯಿಂದ ಜರಗನ ಹಳ್ಳಿ ಕಡೆಗೆ ಸಾಗುವ ರಸ್ತೆಯ ಎಡ ಭಾಗದಲ್ಲಿನ ಪಾದಚಾರಿ ಮಾರ್ಗವು ಸಂಪೂರ್ಣ ಹಾಳಾಗಿದ್ದು, ಕೂಡಲೇ ಸರಿಪಡಿಸಿ ಗ್ರಿಲ್‌ಗಳನ್ನು ಅಳವಡಿಸಿ ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು. ಕೋಣನ ಕುಂಟೆ ಕಡೆಯಿಂದ ಬರುವ ವಾಹನಗಳು ಸಿಗ್ನಲ್‌ ಬಳಿ ಮುಕ್ತ ಎಡ ತಿರುವು ಪಡೆಯಲು ರಸ್ತೆಗೆ ಅಡ್ಡಲಾಗಿರುವ ಮರಗಳ ಕೊಂಬೆಗಳನ್ನು ಕತ್ತರಿಸಬೇಕು. ಬೆಸ್ಕಾಂನ ವಿದ್ಯುತ್‌ ಕಂಬವನ್ನು ಪಾದಚಾರಿ ಮಾರ್ಗದ ಅಂಚಿಗೆ ಸ್ಥಳಾಂತರಿಸಬೇಕು. ಸರ್ವೀಸ್ ರಸ್ತೆಯನ್ನು ರಿಂಗ್‌ ರಸ್ತೆ ಮಟ್ಟಕ್ಕೆ ಎತ್ತರಿಸಿ ಡಾಂಬರೀಕರಣ ಮಾಡಬೇಕು. ಇಲಿಯಾಸ್‌ ನಗರದ ಕಡೆಯಿಂದ ಬರುವ ವಾಹನಗಳು ಬನಶಂಕರಿಯತ್ತ ಸಂಚರಿಸಲು ಮುಕ್ತ ಎಡ ತಿರುವಿಗೆ ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದರು.

ಜಯದೇವ ಮೇಲ್ಸೇತುವೆಯ ಈಸ್ಟ್‌ ಎಂಡ್‌ ಮುಖ್ಯ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು. ಕೆಳ ಸೇತುವೆಯಲ್ಲಿ ನೀರು ಸಂಗ್ರಹವಾಗುವುದನ್ನು ತಪ್ಪಿಸಲು ಕೈಗೊಂಡಿರುವ ಚರಂಡಿ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು. ಸರ್ವೀಸ್ ರಸ್ತೆಯಲ್ಲಿ ಹಾಕಿರುವ ಭಗ್ನಾವಶೇಷಗಳನ್ನು ತೆರವುಗೊಳಿಸಬೇಕು’ ಎಂದು ಮೆಟ್ರೋ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಟಿಎಂ ಲೇಔಟ್‌ – ಸಿಲ್ಕ್ ಬೋರ್ಡ್‌ ಕಡೆಯ ಎರಡೂ ಬದಿಯ ಚರಂಡಿಗಳು ಹಾಳಾಗಿದ್ದು, ಮಳೆ ಬಂದಾಗ ರಾಜಕಾಲುವೆ ಉಕ್ಕಿ ಹರಿದು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ರಾಜಕಾಲುವೆ ವಿಭಾಗವು ಕೂಡಲೇ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ನಿವಾರಿಸಬೇಕು’ ಎಂದು ಸೂಚಿಸಿದರು.

ಇಬ್ಬಲೂರು ಜಂಕ್ಷನ್‌ನಿಂದ ಸರ್ಜಾಪುರ ರಸ್ತೆ ಕಡೆಗೆ ಮಳೆ ನೀರು ನಿಲ್ಲುವುದನ್ನು ತಪ್ಪಿಸಲು ಕೈಗೊಂಡಿರುವ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಸರ್ಜಾಪುರ ರಸ್ತೆಯಿಂದ ಹೊರವರ್ತುಲ ರಸ್ತೆಯತ್ತ ಸಾಗುವ ವಾಹನಗಳ ಸಂಚಾರಕ್ಕೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲು ವೃತ್ತದಲ್ಲಿರುವ ಎರಡು ಐ ಲ್ಯಾಂಡ್‌ಗಳನ್ನು ಮರು ವಿನ್ಯಾಸಗೊಳಿಸಬೇಕು. ಹರಳೂರಿನಿಂದ ಇಬ್ಬಲೂರುವರೆಗೆ ಎರಡೂ ಬದಿಯಲ್ಲಿ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌, ಬಿಡಿಎ ಆಯುಕ್ತ ರಾಜೇಶ್‌ ಗೌಡ, ಜಲಮಂಡಳಿ ಅಧ್ಯಕ್ಷ ಜಯರಾಂ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ, ಸಂಚಾರ ವಿಭಾಗದ ಪೊಲೀಸ್‌ ಜಂಟಿ ಆಯುಕ್ತ ರವಿಕಾಂತೇಗೌಡ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಮತ್ತಿತರರು ಉಪಸ್ಥಿತರಿದ್ದರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button