
ಬೆಂಗಳೂರು: ನಗರದಲ್ಲಿ ಕೇವಲ ದಾಖಲೆ ಪರಿಶೀಲನೆಗೆ ಇನ್ಮುಂದೆ ಟ್ರಾಫಿಕ್ ಪೊಲೀಸರು ಗಾಡಿಯನ್ನು ನಿಲ್ಲಿಸ ಬಾರದು. ಕೇವಲ ಟ್ರಾಫಿಕ್ ರೂಲ್ಸ್‌ನ್ನು ಉಲ್ಲಂಘಿಸಿದವರ ವಾಹನಗಳನ್ನು ಮಾತ್ರ ಸ್ಟಾಪ್ ಮಾಡುವಂತೆ ಟ್ರಾಫಿಕ್ ಪೊಲೀಸರಿಗೆ ಖುದ್ದು ಡಿಜಿ & ಐಜಿಪಿ ಪ್ರವೀಣ್ ಸೂದ್ ಸೂಚನೆ ಹೊರಡಿಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಪ್ರವೀಣ್ ಸೂದ್, ನಗರದಲ್ಲಿ ವಾಹನಗಳ ತಡೆದು ಪರಿಶೀಲನೆ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದೆ. ರಸ್ತೆಯಲ್ಲಿ ಬರುವ ವಾಹನಗಳನ್ನು ಸುಖಾಸುಮ್ಮನೆ ತಡೆದು ವಾಹನಗಳ ಪರಿಶೀಲನೆ ನಡೆಸುವಂತಿಲ್ಲ. ಡ್ರಿಂಕ್ ಆಂಡ್ ಡ್ರೈವ್ ಮಾಡುವ ವಾಹನಗಳಿಗೆ ಮಾತ್ರ ತಪಾಸಣೆ ನಡೆಸಿ. ಕಣ್ಣಿಗೆ ಕಾಣುವಂತೆ ರೂಲ್ಸ್ ಬ್ರೇಕ್ ಮಾಡುವಂತಹ ವಾಹನಗಳನ್ನು ತಡೆದು ಪರಶೀಲಿಸಿ ಎಂದು ನಗರದ ಪೊಲೀಸ್ ಕಮೀಷನರ್ ಹಾಗೂ ಟ್ರಾಫಿಕ್ ಜಂಟಿ ಆಯುಕ್ತರನ್ನು ಟ್ಯಾಗ್ ಮಾಡಿ ಡಿಜಿಪಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರ ದಂಡ ಕಲೆಕ್ಷನ್ ಎಫೆಕ್ಟ್‌ನಿಂದಲೇ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಎಲ್ಲೆಂದರಲ್ಲಿ ರೂಲ್ಸ್ ಉಲ್ಲಂಘನೆ ಮಾಡದೇ ಇದ್ರೂ ಟ್ರಾಫಿಕ್ ಪೊಲೀಸರು ವಾಹನ ಅಡ್ಡ ಹಾಕ್ತಾರೆ ಎಂದು ಸಾರ್ವಜನಿಕರಿಂದ ವ್ಯಾಪಕ ದೂರು ಕೇಳಿಬಂದಿತ್ತು. ನಿಯಮಗಳು ತಮಗೆ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿರುವ ಬಹುತೇಕ ಸಂಚಾರ ಪೊಲೀಸರು, ದಾಖಲೆಗಳ ಪರಿಶೀಲನೆ ನೆಪದಲ್ಲಿ ಸಿಕ್ಕ ಸಿಕ್ಕ ವಾಹನಗಳನ್ನು ಅಡ್ಡಗಟ್ಟುತ್ತಿರುವುದು ಜನರ ಸಿಟ್ಟಿಗೆ ಕಾರಣವಾಗಿತ್ತು.

ಸಾರ್ವಜನಿಕರು ಟ್ವೀಟ್ ಮೂಲಕ ಪೊಲೀಸ್ ಮಹಾನಿರ್ದೇಶಕರಿಗೆ ಈ ಬಗ್ಗೆ ದೂರು ದಾಖಲಿಸಿದ್ದರು. ಹಾಗಾಗಿ ಟ್ವೀಟ್ ಮೂಲಕ ಎಲ್ಲೆಂದರಲ್ಲಿ ದಾಖಲೆಯ ಪರಿಶೀಲನೆ ನೆಪದಲ್ಲಿ ಗಾಡಿಯನ್ನು ನಿಲ್ಲಿಸುವಂತಿಲ್ಲ. ಈ ಬಗ್ಗೆ ಬೆಂಗಳೂರು ನಗರ ಕಮೀಷನರ್‌ಗೆ ಹಾಗೂ ಟ್ರಾಫಿಕ್ ಪೊಲೀಸರಿಗೆ ತಕ್ಷಣ ಜಾರಿಗೊಳಿಸುವಂತೆ ಸೂಚನೆ ಕೊಡುತ್ತೇನೆ ಎಂದು ಬೆಂಗಳೂರಿಗರಿಗೆ ಪ್ರವೀಣ್ ಸೂದ್ ಭರವಸೆ ನೀಡಿದ್ದಾರೆ.
ಮೋಟಾರು ವಾಹನಗಳ ಕಾಯ್ದೆ ಏನು ಹೇಳುತ್ತೆ?
ಮೋಟಾರು ವಾಹನಗಳ ಕಾಯ್ದೆಯಡಿ ದಾಖಲೆ ಪರಿಶೀಲನೆ ನೆಪದಲ್ಲಿ ಎಲ್ಲೆಂದರಲ್ಲಿ ಕೈ ಹಿಡಿದು ವಾಹನ ಅಡ್ಡ ಹಾಕುವಂತಿಲ್ಲ. ಕಣ್ಣಿಗೆ ಕಾಣುವಂತೆ ರೂಲ್ಸ್ ಬ್ರೇಕ್ ಮಾಡಿದರೆ ಮಾತ್ರ ವಾಹನ ಸವಾರರನ್ನು ಹಿಡಿಯಬೇಕು. ಹಿಡಿದು ಪರಿಶೀಲನೆ ನಡೆಸಿ ದಂಡ ವಿಧಿಸಬಹುದು.