
ಬೆಂಗಳೂರು : ಸಂಚಾರ ನಿಯಮ ಉಲ್ಲಂಘಿಸಿ ದಂಡದ ಮೊತ್ತವನ್ನು ಕಟ್ಟದೆ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಸರ್ಕಾರ ಭರ್ಜರಿ ರಿಯಾಯಿತಿ ಘೋಷಿಸಿದೆ. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸ್ಸಿನ ಮೇರೆಗೆ ದಂಡದ ಮೊತ್ತದಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡಲು ಸರ್ಕಾರ ಆದೇಶ ಹೊರಡಿಸಿದೆ.
1300 ಕೋಟಿ ರೂಗಳಿಗೂ ಅಧಿಕ ದಂಡದ ಮೊತ್ತ ಬಾಕಿ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಹಾಗೂ ಇದರಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕಳೆದ ಜನವರಿ 27ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಆಗಿರುವ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಅಧ್ಯಕ್ಷತೆಯ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಗಿತ್ತು.

ನಂತರ ಕಾನೂನು ಸೇವೆಗಳ ಪ್ರಾಧಿಕಾರ ಸರ್ಕಾರಕ್ಕೆ ಈ ಕುರಿತು ಶಿಫಾರಸ್ಸು ಮಾಡಿತ್ತು. ಅದರಂತೆ ಶೇಕಡ 50ರಷ್ಟು ರಿಯಾಯಿತಿ ನೀಡಲು ಸಾರಿಗೆ ಇಲಾಖೆ ಅದೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಸಂಚಾರಿ ಪೊಲೀಸ್ ವಿಧಿಸಿದ ದಂಡದ ಮೊತ್ತ ಬಾಕಿ ಉಳಿಸಿಕೊಂಡಿರುವವರು ಫೆಬ್ರವರಿ 11ರೊಳಗೆ ದಂಡ ಕಟ್ಟಿದರೆ ಅಂತಹವರು ರಿಯಾಯಿತಿ ಪಡೆಯಬಹುದಾಗಿದೆ. ಫೆಬ್ರವರಿ 11ರ ರಾಜ್ಯ ವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್ ಹಿನ್ನೆಲೆಯಲ್ಲಿ ಈ ರಿಯಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.
ರಾಜ್ಯದಲ್ಲಿ ಸಂಚಾರ ಪೊಲೀಸರು ವಿಧಿಸಿರುವ ದಂಡದ ಮೊತ್ತದಲ್ಲಿ ಸುಮಾರು 1300 ಕೋಟಿ ರೂ. ಬಾಕಿ ಇತ್ತು. ಆ ಕುರಿತು ಸರ್ಕಾರಕ್ಕೆ ಪ್ರಾಧಿಕಾರ ಸಲಹೆ ನೀಡಿತ್ತು. ಅದನ್ನು ಪರಿಗಣಿಸಿ ಸರ್ಕಾರ ದಂಡದ ಮೊತ್ತದಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು, ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳೂ ಆದ ಬಿ. ವೀರಪ್ಪ ಅವರು ತಿಳಿಸಿದ್ದಾರೆ.