ಟಿಎಂಸಿ ಶಾಸಕ ಇದ್ರಿಸ್ ಅಲಿ ಮನೆ ಧ್ವಂಸಗೊಳಿಸಿದ ಅವರದೇ ಪಕ್ಷದ ಕಾರ್ಯಕರ್ತರು

ಸ್ಥಳೀಯ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಲು ಯತ್ನಿಸಿದ ಪಶ್ಚಿಮ ಬಂಗಾಳದ ಮುರ್ಷಿದಾ ಬಾದ್ ಜಿಲ್ಲೆಯ ಭಾಗೋ ಬಂಗೋಲಾದಲ್ಲಿ ಟಿಎಂಸಿ ಶಾಸಕ ಇದ್ರಿಸ್ ಅಲಿ ಅವರ ಮನೆಯನ್ನು ಅವರದೇ ಪಕ್ಷದ ಕಾರ್ಯಕರ್ತರೇ ಧ್ವಂಸಗೊಳಿಸಿದ್ದಾರೆ.
ಸ್ಥಳೀಯ ಟಿಎಂಸಿ ನಾಯಕರು ಸೇರಿ ನೂರಾರು ಜನರ ಗುಂಪು ಕಳೆದ ರಾತ್ರಿ ಶಾಸಕರ ಮನೆಗೆ ನುಗ್ಗಿ ಧಾಂದಲೆ ನಡೆಸಿದ್ದು, ವಾಹನಗಳನ್ನು ಜಖಂಗೊಳಿಸಿ ಕೆಲ ವಸ್ತುಗಳನ್ನು ದೊಚ್ಚಿದ್ದಾರೆ. ಪಕ್ಷದ ಪ್ರಮುಖ ಹುದ್ದೆಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲೂ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜನರು ಮಾಡುತ್ತಿರುವ ಆರೋಪ ಆಧಾರ ರಹಿತವಾಗಿದೆ ಎಂದು ಪ್ರತಿಪಾದಿಸಿದ ಅಲಿ, ಕೆಲವು ಸ್ಥಳೀಯ ಟಿಎಂಸಿ ನಾಯಕರು ಪಿತೂರಿ ಎಂದು ಹೇಳಿದ್ದಾರೆ.
ಕೆಲವು ಸ್ಥಳೀಯ ನಾಯಕರು ಇಂತಹ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಬ್ಲಾಕ್ ಮಟ್ಟದ ಸಂಸ್ಥೆಯಲ್ಲಿ ಕೆಲ ವ್ಯಕ್ತಿಗಳ ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಸಂಸದರೂ ಅದ ಅಲಿ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ವಿಧ್ವಂಸಕ ಕೃತ್ಯದ ನಂತರ ಪ್ರದೇಶದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಆಲಿ ವಿರುದ್ದ ಸ್ಥಳೀಯ ಟಿಎಂಸಿ ಮುಖಂಡರು ಕಾರ್ಯಕರ್ತರು ನಡುವೆ ನಡೆದಿದ್ದ ತೆರೆಮರೆ ಜಗಳ ಈಗ ಬೀದಿಗೆ ಬಂದಿದೆ.