
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಜ್ಯೋತಿಷಿ ಮನೆಯಲ್ಲಿ ರಾಬರಿ ನಡೆದಿದೆ. ಕೆಂಗೇರಿ ರೈಲ್ವೆ ನಿಲ್ದಾಣದ ಸಮೀಪದ ಜ್ಯೋತಿಷಿ ಪ್ರಮೋದ್ ಮನೆಯಲ್ಲಿ ದರೋಡೆ ನಡೆದಿದೆ. ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ಜ್ಯೋತಿಷಿ ಪ್ರಮೋದ್ ಎಂಬುವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹಲ್ಲೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಜ್ಯೋತಿಷ್ಯ ಕೇಳುವ ನೆಪದಲ್ಲಿ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರಮೋದ್ ಮನೆಗೆ ಮೂವರು ಅಪರಿಚಿತರು ಏಕಾಏಕಿ ನುಗ್ಗಿ ಹಲ್ಲೆ ನಡೆಸಿ, 400 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಪ್ರಮೋದ್ ಮುಖಕ್ಕೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಮೋದ್ ಒಂಟಿಯಾಗಿ ವಾಸಿಸುತ್ತಿರುವ ಮಾಹಿತಿ ತಿಳಿದು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿದ್ದಾರೆ.