ಜ್ಯೂಯಲರ್ಸ್ ಅಂಗಡಿಯಲ್ಲಿ ಖರೀದಿ ನೆಪದಲ್ಲಿ ಕಳವು ಖದೀಮನ ಸೆರೆ

ಜ್ಯೂಯಲರ್ಸ್ ಅಂಗಡಿಗೆ ಹೋಗಿ ಚಿನ್ನದ ಸರ ಖರೀದಿಯ ನೆಪಮಾಡಿ ಎರಡು ಚಿನ್ನದ ಚೈನುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಖತರ್ನಾಕ್ ಖದೀಮನೊಬ್ಬನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಗ್ಗನಹಳ್ಳಿಯ ಸಂಜೀವಿನಿನಗರದ ರಮೇಶ್ ಕೆ.ಹೆಚ್(೨೮)ಬಂಧಿತ ಆರೋಪಿಯಾಗಿದ್ದು ಆತನಿಂದ ೩ ಲಕ್ಷ ಮೌಲ್ಯದ ೬೦ ಗ್ರಾಂ ತೂಕದ ಮೂರು ಚಿನ್ನದ ಚೈನುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.
ಕಳೆದ ಆ.೩೧ರಂದು ರಾತ್ರಿ ೮ರ ವೇಳೆ ಮಾಗಡಿ ಮುಖ್ಯರಸ್ತೆ ಸುಂಕದಕಟ್ಟೆ ಇಲ್ಲಿರುವ ಕೃಷ್ಣ ಎಂಟರ್ ಪ್ರೈಸಸ್ ಅಂಡ್ ಜ್ಯೂಯಲರ್ಸ್ ಗೆ ಬಂದ ಆರೋಪಿಯು ಗ್ರಾಹಕನ ಸೋಗಿನಲ್ಲಿ ಅಂಗಡಿಗೆ ಬಂದುಚಿನ್ನದ ಚೈನುಗಳನ್ನು ನೋಡುವಂತೆ ಖರೀದಿಯ ಎರಡು ಚಿನ್ನದ ಚೈನುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.
ಈ ಸಂಬಂಧ ಅಂಗಡಿಯ ಮಾಲೀಕ ದಿನೇಶ್ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಕಾಮಾಕ್ಷಿಪಾಳ್ಯ ಪೊಲೀಸ್ ಇನ್ಸ್ಪೆಕ್ಟರ್ ಲೋಹಿತ್ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ಬಂಧನದಿಂದ.ಕಾಮಾಕ್ಷಿಪಾಳ್ಯ ರಾಜಗೋಪಾಲ ನಗರ ಪೊಲೀಸ್ ಠಾಣೆಗಳ ಎರಡು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದರು.