ಜೆಡಿಎಸ್ ಸದಸ್ಯ ಪ್ರಶಾಂತ್ ಹತ್ಯೆ : ಪೊಲೀಸ್ ಅಧಿಕಾರಿಗಳ ವಜಾಕ್ಕೆ ರೇವಣ್ಣ ಆಗ್ರಹ

ನಗರಸಭೆಯ ಜೆಡಿಎಸ್ ಸದಸ್ಯ ಪ್ರಶಾಂತ್ ಹತ್ಯೆಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಹಾಗೂ ಮೂವರು ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರತಿಭಟನೆ ನಡೆಸಿದರು.
ಪ್ರಶಾಂತ್ ಹತ್ಯೆಯಾಗಿರುವ ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ರೇವಣ್ಣ ಆಗಮಿಸಿದರು. ಜತೆಗೆ ಅಪಾರ ಪ್ರಮಾಣದ ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಯಿತು.
ಹತ್ಯೆಯನ್ನು ಖಂಡಿಸಿ ರೇವಣ್ಣ ಪ್ರತಿಭಟನೆ ಆರಂಭಿಸಿದ್ದಲ್ಲದೆ ಹತ್ಯೆಗೆ ಕಾರಣಕರ್ತರಾದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಹಾಸನ ನಗರ, ಗ್ರಾಮಾಂತರ ಠಾಣೆ ರೌಡಿಗಳ ತಾಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೃತ್ತ ನಿರೀಕ್ಷಕ ರೇಣುಕಾ ಪ್ರಸಾದ್, ಡಿವೈಎಸ್‍ಪಿ ಉದಯ ಭಾಸ್ಕರ್, ಆರೋಗ್ಯಪ್ಪ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.ಮರಳು ದಂಧೆ ಹಾಗೂ ಮಟ್ಕಾ ದಂಧೆ ಮೂಲಕ ಹಣ ವಸೂಲಿ ಮಾಡುತ್ತಿದ್ದಾರೆ.
ಅವರ ಫೋನ್ ರೆಕಾರ್ಡರ್ ಮಾಹಿತಿ ಪಡೆದರೆ ಎಲ್ಲವೂ ಗೊತ್ತಾಗಲಿದೆ ಎಂದು ಆರೋಪಿಸಿದರು. ಮೂವರು ಅಧಿಕಾರಿಗಳನ್ನು ವಜಾ ಮಾಡುವವರೆಗೂ ಪ್ರಶಾಂತ್ ನಾಗರಾಜ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್ ಅವರು ಸಹ ಪ್ರಶಾಂತ್ ಹತ್ಯೆ ಘಟನೆಯನ್ನು ಖಂಡಿಸಿದ್ದು, ಭದ್ರತಾ ವೈಫಲ್ಯದಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಪ್ರಶಾಂತ್ ಅವರ ಕುಟುಂಬ ಮತ್ತು ಸ್ನೇಹಿತರ ಆಕ್ರಂಧನ ಮುಗಿಲು ಮುಟ್ಟಿತ್ತು.ನಗರದ ಕಟ್ಟಿನಕೆರೆ ಮಾರುಕಟ್ಟೆ ಪ್ರದೇಶದಲ್ಲಿ ಅಘೋಷಿತ ಬಂದ್ ನಿರ್ಮಾಣವಾಗಿದ್ದು, ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಡಿವೈಎಸ್‍ಪಿ ಉದಯಭಾಸ್ಕರ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು, ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಭದ್ರತೆ ಒದಗಿಸಿದ್ದರು.