Uncategorized

ಜೆಡಿಎಸ್ ಶಾಸಕರಿಗೆ ಸಿದ್ದು ಪತ್ರ ಎಚ್‌ಡಿಕೆ ಆಕ್ರೋಶ

ರಾಜ್ಯಸಭಾ ಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತ ಹಾಕುವಂತೆ ಜೆಡಿಎಸ್ ಶಾಸಕರಿಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಪತ್ರ ಬರೆದಿರುವುದಕ್ಕೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ಬಿ ಟೀಂ ಎಂದು ಜೆಡಿಎಸ್ ಬಗ್ಗೆ ಟೀಕೆ ಮಾಡುತ್ತಿದ್ದ ಸಿದ್ಧರಾಮಯ್ಯನವರಿಗೆ ನಾಚಿಕೆ ಆಗಬೇಕು.

ಆತ್ಮಸಾಕ್ಷಿ ಎಂದರೆ ಏನು ಅಂತ ಅವರಿಗೆ ಗೊತ್ತಿದೆಯೇ ಎಂದು ಹರಿಹಾಯ್ದಿದ್ದಾರೆ.ಜೆಡಿಎಸ್ ಕಚೇರಿಯಲ್ಲಿಂದು ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯನವರು ಆತ್ಮಸಾಕ್ಷಿಯ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಹಿಂದೆ ಜೆಡಿಎಸ್ ಶಾಸಕರಿಂದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಸಿದ್ದರು.

ಆಗ ಅವರ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು ಎಂದು ವಾಗ್ದಾಳಿ ನಡೆಸಿದರು.ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಸಿದ್ಧರಾಮಯ್ಯ ಹೇಳುತ್ತಿದ್ದರು.

ಈಗ ಜಾತ್ಯಾತೀತೆ ನೆನಪಾಗುತ್ತಿದೆಯೇ ಸಿದ್ಧರಾಮಯ್ಯನವರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶಭರಿತರಾಗಿ ಹೇಳಿದರು.ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ನ್ನು ಬೆಂಬಲಿಸುವಂತೆ ಕಾಂಗ್ರೆಸ್ ನಾಯಕರಿಗೆ ೩-೪ ದಿನಗಳಿಂದ ಮನವಿ ಮಾಡಿದ್ದೇನೆ. ಅವರ ಜತೆಗೆ ಚರ್ಚೆಗೆ ಸಿದ್ಧ ಎಂದು ಹೊಸ ಸಂಪ್ರದಾಯ ಪಾಲನೆಗೂ ಮುಂದಾಗಿದ್ದೇನೆ.

ಇದನ್ನು ನನ್ನ ಬಲಹೀನತೆ ಅಂದುಕೊಳ್ಳುವುದು ಬೇಡ ಎಂದರು.ಕಾಂಗ್ರೆಸ್ ನಾಯಕರು ನಾವು ಮೊದಲು ಅಭ್ಯರ್ಥಿ ಹಾಕಿದ್ದೇವೆ ಎದಿದ್ದಾರೆ.

ಸಿದ್ಧರಾಮಯ್ಯ ನಮಗೇ ಬೆಂಬಲ ನೀಡಿ ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿಗೂ ಮುನ್ನ ಅಭ್ಯರ್ಥಿ ಹಾಕುವ ನಿರ್ಧಾರವನ್ನು ಜೆಡಿಎಸ್ ಮಾಡಿತ್ತು. ಮಾಜಿ ಪ್ರಧಾನಿ ದೇವೇಗೌಡ ಅವರು ಸೋನಿಯಾಗಾಂಧಿ ಅವರ ಜತೆ ಮಾತನಾಡಿದ್ದರು ಎಂದರು.

ರಾಜ್ಯಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಹಾಕುವ ಸಂಬಂಧ ಕಾಂಗ್ರೆಸ್ ನಾಯಕರು ಜೆಡಿಎಸ್ ಜತೆ ಚರ್ಚಿಸಿರಲಿಲ್ಲ. ೨ನೇ ಅಭ್ಯರ್ಥಿ ಹಾಕುತ್ತೇವೆ ಎಂದು ಹೇಳಿರಲಿಲ್ಲ.

ನಮಗೆ ಬೆಂಬಲ ಕೊಡಿ ಎಂದು ಒಳ್ಳೆಯ ಮಾತಿನಿಂದ ಕಾಂಗ್ರೆಸ್ ನಾಯಕರ ಮನಸ್ಸು ಗೆಲ್ಲಲು ಹೊರಟರೆ ಅದು ಆಗಿಲ್ಲ ಎಂದರು.ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಕಾಂಗ್ರೆಸ್ ನಿಮ್ಮನ್ನು ಸಿಎಂ ಮಾಡಲಿಲ್ಲವೆ ಎಂದು ಹೇಳಿದ್ದಾರೆ.

ನಾನು ಹೇಳುತ್ತೇನೆ ನಿಮ್ಮನ್ನು ಜನ ತಿರಸ್ಕೃರಿಸಿದ್ದರು. ೭೯ ಸ್ಥಾನಕ್ಕೆ ನೀವು ಇಳಿದಿದ್ದರೂ ಬಿಜೆಪಿ ನಾಯಕರು ನನ್ನ ಸಂಪರ್ಕದಲ್ಲಿದ್ದರು ನಮ್ಮ ಮನೆ ಕದ ತಟ್ಟಿದವರು ನೀವು ಎಂದು ದೇವೇಗೌಡರು ಒಂದು ಅವಕಾಶ ಮಾಡಿಕೊಟ್ಟರು.

ನೀವಾಗಿಯೇ ಬಂದು ಬೆಂಬಲ ಕೊಟ್ಟಿದ್ದೀರಿ ಮರೆಯಬೇಡಿ ಎಂದು ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.ನಾನು ಮುಖ್ಯಮಂತ್ರಿಯಾದ ಮೇಲೆ ಕ್ಯಾಬಿನೆಟ್ ಹೀಗೆ ಆಗಬೇಕು ಎಂದು ಒತ್ತಡ ಹೇರಿದವರು ಯಾರು, ಇಂತಹ ಅಧಿಕಾರಿ ಬೇಕು ಎಂದು ಹಾಕಿಸಿಕೊಂಡವರು ಯಾರು, ನಾನು ಎಲ್ಲವನ್ನು ಸಹಿಸಿಕೊಂಡಿದ್ದೇನೆ.

ರೈತರ ಸಾಲ ಮನ್ನಾ ಬಗ್ಗೆ ಲಘುವಾಗಿ ಮಾತನಾಡಿದರು ನಾನು ರೈತರ ಸಾಲ ಮನ್ನಾ ಮಾಡಿದೆ. ಇದೆಲ್ಲಾ ಮುಗಿದು ಹೋದ ಅಧ್ಯಾಯ ನೀವು ಸಿಎಂ ಆಗಿದ್ದಾಗ ಸಮಾಜವನ್ನು ಒಡೆದವರು.

ಈಗ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಹೇಳುತ್ತಾ ಇದ್ದೀರಿ. ತೀರ್ಥಹಳ್ಳಿ, ಬಸವಕಲ್ಯಾಣದಲ್ಲಿ ಹೋರಾಟ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.ಕಿಶನ್‌ರೆಡ್ಡಿ ಭೇಟಿ ಇಲ್ಲಬಿಜೆಪಿಯ ರಾಜ್ಯಸಭಾ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರನ್ನು ನಾನು ಭೇಟಿ ಮಾಡಿಲ್ಲ.

ಕಿಶನ್ ರೆಡ್ಡಿ ತಾಜ್ ವೆಸ್ಟನ್ ಹೋಟೆಲ್‌ನಲ್ಲಿ ತಂಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನಂತೂ ಅವರನ್ನು ಭೇಟಿ ಮಾಡಿಲ್ಲ. ನಾನ್ಯಾಕೆ ಭೇಟಿ ಮಾಡಲಿ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜೆಡಿಎಸ್‌ನ ಭಿನ್ನಮತೀಯ ಶಾಸಕರನ್ನು ಮನವೊಲಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಶಾಸಕರಿಗೂ ಪಕ್ಷದ ಸಚೇತಕರು ಪತ್ರ ಬರೆದಿದ್ದಾರೆ.

ಮೇಸೆಜ್ ಕೂಡಾ ಕಳುಹಿಸಿದ್ದಾರೆ, ಗುಬ್ಬಿ ಶಾಸಕ ಶ್ರೀನಿವಾಸ ಜತೆ ಸಹ ಮಾತನಾಡಿದ್ದೇನೆ. ಜಿ.ಟಿ. ದೇವೇಗೌಡ ಅವರು ಜೆಡಿಎಸ್‌ಗೆ ಮತ ಹಾಕುತ್ತೇನೆ ಎಂದಿದ್ದಾರೆ ಎಂದರುಕಾಂಗ್ರೆಸ್ ಪಕ್ಷ ಏನೆ ಅಡ್ಡ ಮತದಾನ ಮಾಡಿಸಿದರೂ ಅವರ ಅಭ್ಯರ್ಥಿ ಗೆಲ್ಲಲ್ಲ.

ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಅದರಿಂದ ಅವಕಾಶವಾಗುತ್ತದೆ. ಬಿಜೆಪಿ ಬಿ ಟೀಂ ನಾಯಕರು ಯಾರು ಎಂದು ೧೦ನೇ ತಾರಿಖೀನ ನಂತರ ಗೊತ್ತಾಗುತ್ತದೆ. ನಾವು ಕಾಂಗ್ರೆಸ್ ಪಕ್ಷಕ್ಕೆ ೨ನೇ ಹಂತದ ಪ್ರಾಶಸ್ತ್ಯ ಮತ ಕೊಡುವಂತೆ ಕೇಳಿದ್ದೇವೆ ಎಂದರು.

ಅಡ್ಡ ಮತದಾನ ಮಾಡಿದರೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಸಕರನ್ನು ಅನರ್ಹಗೊಳಿಸುವುದು ಎಲ್ಲೂ ಆಗಲ್ಲ. ಸುಮ್ಮನೆ ಅದನ್ನು ನಿಯಮ ಮಾಡಲಾಗಿದೆ ಅಷ್ಟೆ.

ಅಡ್ಡ ಮತದಾನ ಆದರೆ ಏನೂ ಕ್ರಮ ಕೈಗೊಳ್ಳಲು ಬರಲ್ಲ ಎಂದರು.ವಿದೇಶದಲ್ಲಿರುವ ಶಾಸಕ ಗೌರಿಶಂಕರ್ ಇಂದು ಸಂಜೆ ಬರುತ್ತಾರೆ. ನಾನು ಅವರ ಜತೆ ಮಾತನಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್‌ನವರಿಗೆ ಜೆಡಿಎಸ್ ಮುಗಿಸಬೇಕು ಎಂಬ ಉದ್ದೇಶವಿದೆ. ಬಿಜೆಪಿ ಉಳಿದರೂ ಪರವಾಗಿ ಜೆಡಿಎಸ್ ಇರಬಾರದು ಎಂಬುದು ಅವರು ಉದ್ದೇಶ ಎಂದು ಕಿಡಿಕಾರಿದರು.ಜೆಡಿಎಸ್‌ನ್ನು ಯಾರಿಂದಲೂ ಮುಗಿಸಲು ಆಗಲ್ಲ.

ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಎಲ್ಲಿದೆ. ಕಾಂಗ್ರೆಸ್‌ಗೆ ಬೆಣೆ ಹೊಡೆದು ಹೋಗುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.ಸಮಾವೇಶಇದೇ ತಿಂಗಳ ೨೨ ರಂದು ಬೆಂಗಳೂರಿನಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಮಾಡುತ್ತಿದ್ದೇವೆ.

ಬೆಂಗಳೂರಿನಲ್ಲಿ ೧ ತಿಂಗಳು ಜನತಾ ಸೇವಕ ಎಂಬ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿದ್ದೇವೆ. ಬಿಬಿಎಂಪಿ ಮತ್ತು ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿದ್ದೇವೆ. ನಮ್ಮ ಗುರಿ ೧೨೩.

ಆ ಗುರಿ ಮುಟ್ಟುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button