ರಾಜಕೀಯ

ಜೆಡಿಎಸ್ ಅಧಿಕಾರಕ್ಕೆ ತರುವ ಆಸೆಗೆ ತಣ್ಣೀರೆರಚುತ್ತಿರುವ ಶಾಸಕರು, ಮುಖಂಡರು

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಗುರಿ ಹೊಂದಿರುವ ಜೆಡಿಎಸ್ಗೆ ಕೆಲವು ಶಾಸಕರು, ಮುಖಂಡರು ಕೈಜೋಡಿಸುವ ಬದಲು ದೂರ ಸರಿಯುತ್ತಿದ್ದಾರೆ.’ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಗೊಂಡ ಶಾಸಕರು ಹಾಗೂ ಮುಖಂಡರ ಮನವೊಲಿಸುವ ಪ್ರಯತ್ನಗಳು ಸಫಲವಾಗಿಲ್ಲ.

ನಾಯಕರೊಂದಿಗಿನ ವಿಶ್ವಾಸಾರ್ಹತೆ ಕೊರತೆ ಯಿಂದ ಅಸಮಾಧಾನ ಗೊಂಡು ಪಕ್ಷ ತೊರೆದು ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡಿದ್ದಾರೆ.

ಇದರ ಪರಿಣಾಮದಿಂದ ಚುನಾವಣೆಗಳಲ್ಲಿ ನಿರಂತರ ಸೋಲು ಅನುಭವಿಸುವಂತಾಗಿದೆ. ಸರಣಿ ಸೋಲಿನ ನಂತರವೂ ಪಕ್ಷ ತೊರೆಯುವ ಶಾಸಕರು, ಮುಖಂಡರ ಮನವೊಲಿಕೆ ಪ್ರಯತ್ನ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ.

ಪಕ್ಷ ತೊರೆಯುತ್ತಿರುವವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ಕೋಲಾರದ ಶಾಸಕ ಶ್ರೀನಿವಾಸಗೌಡ ಅವರು ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಆರೋಪಕ್ಕೆ ಒಳಗಾಗಿದ್ದಾರೆ.

ಇವರಿಬ್ಬರ ಶಾಸಕತ್ವ ಅನರ್ಹಗೊಳಿಸುವಂತೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ವಿಧಾನ ಸಭಾಧ್ಯಕ್ಷರಿಗೆ ದೂರು ನೀಡಲು ಸಿದ್ಧತೆ ನಡೆಸಲಾಗಿದೆ.ಹೀಗಾಗಿ ಇವರಿಬ್ಬರೂ ಜೆಡಿಎಸ್ ತೊರೆಯುವು ನಿಶ್ಚಿತವಾದಂತಾಗಿದೆ.

ಇನ್ನು ಅಸಮಾಧಾನಗೊಂಡಿದ್ದ ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಶಿವಲಿಂಗೇಗೌಡ ಅವರು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ.ಪಕ್ಷದ ವರಿಷ್ಠರು ಇವರಿಬ್ಬರ ಮನವೊಲಿಸಿದ್ದು ಪಕ್ಷದಲ್ಲೇ ಉಳಿಯಲಿದ್ದಾರೆ ಎಂದು ಜೆಡಿಎಸ್ ನಾಯಕರು ಹೇಳಿದ್ದಾರೆ.ಆದರೆ, ಮುಂದಿನ ರಾಜಕೀಯ ನಡೆಯ ನಿರ್ಧಾರವನ್ನು ಮುಕ್ತವಾಗಿಟ್ಟುಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ತಮ್ಮ ನಿರ್ಧಾರ ಪ್ರಕಟಿಸಲಿದ್ದು, ಜೆಡಿಎಸ್ನಲ್ಲಿ ಉಳಿಯುವ ಸಾಧ್ಯತೆ ವಿರಳ ಎಂದೇ ಹೇಳಲಾಗುತ್ತಿದೆ.

ಶಾಸಕರಾದ ಎ.ಟಿ.ರಾಮಸ್ವಾಮಿ ಹಾಗೂ ಸಿ.ಎಸ್. ಪುಟ್ಟರಾಜು ಸದ್ಯಕ್ಕೆ ಜೆಡಿಎಸ್ನಲ್ಲೇ ಇರುವುದಾಗಿ ಪ್ರಕಟಿಸಿದ್ದಾರೆ.ಉತ್ತರ ಕರ್ನಾಟಕ ಭಾಗದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ.

ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಜೆಡಿಎಸ್ ನೆಲೆಯೂರಲು ಹರಸಾಹಸ ಪಡಬೇಕಾಗಿದೆ.ಜೆಡಿಎಸ್ ಭದ್ರಕೋಟೆ ಹಳೇ ಮೈಸೂರು ಭಾಗದಲ್ಲೂ ದುರ್ಬಲವಾದಂತಾಗಿದೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ ಒಂದು ಸ್ಥಾನ ಮಾತ್ರ ಗೆದ್ದಿದೆ. ಇತ್ತೀಚೆಗೆ ನಡೆದ ಪದವೀಧರ, ಶಿಕ್ಷಕ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದೆ.

ಈ ಚುನಾವಣೆಯಲ್ಲಿ ಈ ಹಿಂದೆ ಗೆದ್ದಿದ್ದ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ.ಚುನಾವಣೆಯ ಸೋಲಿಗೆ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ಪಡೆಯದೆ ಅಭ್ಯರ್ಥಿ ಆಯ್ಕೆ ಮಾಡಿದ್ದು, ಸ್ಥಳೀಯ ನಾಯಕರ ನಡುವಿನ ಭಿನ್ನಾಭಿಪ್ರಾಯ ಪ್ರಮುಖ ಕಾರಣ ಎನ್ನಲಾಗಿದೆ.

ಶಾಸಕರನ್ನು ವಿಶ್ವಾಸಕ್ಕೆ ಪಡೆಯದ ಕಾರಣ ರಾಜ್ಯಸಭೆ ಚುನಾವಣೆಯಲ್ಲೂ ಸೋಲಬೇಕಾಯಿತು ಎಂಬ ಚರ್ಚೆಯಾಗುತ್ತಿದೆ.

2023ರ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲ್ಲಲು ಜೆಡಿಎಸ್ ನಾಯಕರು ಕಾರ್ಯತಂತ್ರ ರೂಪಿಸುತ್ತಿದ್ದರೆ, ಮತ್ತೊಂದೆಡೆ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಪಕ್ಷ ತೊರೆಯುತ್ತಿದ್ದಾರೆ.

ಇದರಿಂದ ಪಕ್ಷ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ.ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ರಾಜ್ಯಾಧ್ಯಕ್ಷರಾದರೂ ಪಕ್ಷದಲ್ಲಿ ಗಮನಾರ್ಹ ಬದಲಾವಣೆಯಾಗಲಿಲ್ಲ.

ಜನತಾ ಪರಿವಾರದ ನಾಯಕರು ನಿರೀಕ್ಷಿತ ಪ್ರಮಾಣದಲ್ಲಿ ಮರಳಿ ಸೇರ್ಪಡೆಯಾಗುತ್ತಿಲ್ಲ. ಪಕ್ಷ ತೊರೆಯುವುದು ನಿಲ್ಲುತ್ತಿಲ್ಲ ಎಂಬ ಜಿಜ್ಞಾಸೆ ಜೆಡಿಎಸ್ ವಲಯದಲ್ಲಿ ನಡೆಯುತ್ತಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button