ಜೂ.20 ರಿಂದ 25ರೊಳಗೆ ಪಿಯು ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜೂ.20 ರಿಂದ 25ರೊಳಗೆ ಪ್ರಕಟಗೊಳ್ಳುವ ಸಾಧ್ಯತೆಗಳಿವೆ.
ಕಳೆದ ಏ.22ರಿಂದ ಮೇ.18ರವರೆಗೆ ನಡೆದಿದ್ದ ದ್ವಿತೀಯ ಪರೀಕ್ಷೆ ಫಲಿತಾಂಶವನ್ನು ಜೂ.15ರೊಳಗೆ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದರು.
ಆದರೆ, ಮೌಲ್ಯಮಾಪನಕ್ಕೆ ನೋಂದಣಿ ಮಾಡಿಕೊಂಡಿದ್ದ ಮೌಲ್ಯಮಾಪಕರ ಗೈರು ಹಾಗೂ ಸಾಲು ಸಾಲು ರಜೆ ಹಿನ್ನಲೆಯಲ್ಲಿ ನಿಗತ ವೇಳೆಗೆ ಫಲಿತಾಂಶ ಪ್ರಕಟ ಮಾಡಲು ಸಾಧ್ಯವಾಗಿಲ್ಲ.
ಹೀಗಾಗಿ ಜೂ.15ರೊಳಗೆ ಫಲಿತಾಂಶ ಪ್ರಕಟ ಮಾಡಲು ಸಾಧ್ಯವಾಗಿಲ್ಲ. ಇದೀಗ ಮೌಲ್ಯಮಾಪನ ಪೂರ್ಣಗೊಂಡಿದ್ದು ಜೂ.20ರಿಂದ 25ರೊಳಗೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಶೀಘ್ರದಲ್ಲೇ ಶಿಕ್ಷಣ ಸಚಿವ ನಾಗೇಶ್ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡುವ ದಿನಾಂಕ ಘೋಷಣೆ ಮಾಡಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಇಂದಿನಿಂದ ಸಿಇಟಿ ಪರೀಕ್ಷೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಆದರೂ ಪಿಯು ಫಲಿತಾಂಶ ಪ್ರಕಟವಾಗಿಲ್ಲ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದರು.
ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಪೂರ್ಣಗೊಳಿಸುತ್ತಿದ್ದಂತೆ ಫಲಿತಾಂಶ ಪ್ರಕಟಗೊಳ್ಳಲಿದೆ.