
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು ಜೂನ್ 4ನೇ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಟ್ವೀಟ್ ಮಾಡಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಜೂನ್ 3ನೇ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಈಗ ಈ ಫಲಿತಾಂಶವು ಜೂನ್ 4ನೇ ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಕೊರೊನಾದಿಂದ ದ್ವಿತೀಯ ಪಿಯುಸಿ ಫಲಿತಾಂಶ ಒಂದು ತಿಂಗಳು ತಡವಾಗಿತ್ತು. ಈ ಬಾರಿ ಏಪ್ರಿಲ್, ಮೇ ತಿಂಗಳಲ್ಲಿ ಪರೀಕ್ಷೆ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮೌಲ್ಯಮಾಪಕರನ್ನು ನಿಯೋಜನೆ ಮಾಡಿ ಫಲಿತಾಂಶ ಬೇಗ ನೀಡಲು ಮೌಲ್ಯಮಾಪನ ಕಾರ್ಯವನ್ನು ಬೇಗನೆ ಆರಂಭಿಸಲಾಗಿದೆ.
ಕೆಲವು ಜಿಲ್ಲೆಗಳಲ್ಲಿ ಮೌಲ್ಯಮಾಪನ ಕಾರ್ಯ ಮುಗಿದಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಮೌಲ್ಯಮಾಪನ ಕಾರ್ಯ ಮಂದಗತಿಯಲ್ಲಿ ಸಾಗಿದೆ ಎನ್ನಲಾಗಿದೆ. ಹಾಗಾಗಿ ಫಲಿತಾಂಶ ಒಂದು ವಾರ ತಡವಾಗಲಿದೆ ಎನ್ನಲಾಗಿದೆ. ಆದರೆ ಆದಷ್ಟು ಬೇಗ ಮೌಲ್ಯಮಾಪನ ಕಾರ್ಯ ಮುಕ್ತಾಯಗೊಳಿಸಿ, ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ, ಏಪ್ರಿಲ್ 22 ರಿಂದ ಆರಂಭವಾಗಿ ಮೇ 18 ಕ್ಕೆ ಮುಕ್ತವಾಗಿದ್ದವು. ರಾಜ್ಯಾದಂತ ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಇದರಲ್ಲಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು ಪರೀಕ್ಷೆ ಬರೆದಿದ್ದು, ಇದರಲ್ಲಿ 6,00,519 ಸಾಮಾನ್ಯ ವಿದ್ಯಾರ್ಥಿಗಳಿದ್ದರೆ, 61,808 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ.