Uncategorized

ಜುಗ್‍ರಾಜ್ ಜೈನ್ ಹತ್ಯೆಯ ಆರೋಪಿಗಳಿಂದ 4.93 ಕೋಟಿ ಮೌಲ್ಯದ ಚಿನ್ನಾಭರಣ ವಶ

ಚಿಕ್ಕಪೇಟೆಯ ದೀಪಂ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜುಗ್‍ರಾಜ್ ಜೈನ್ ಅವರನ್ನು ಕೊಲೆ ಮಾಡಿ ಹಣ, ಆಭರಣ ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಠಾಣೆ ಪೊಲೀಸರು ಇನ್ನೂ ಮೂವರನ್ನು ಬಂಧಿಸಿ ನಗದು ಸೇರಿದಂತೆ 4.93 ಕೋಟಿ ರೂ.

ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.ಸಹೋದರರಾದ ಮಹೇಂದ್ರ, ಓಂಪ್ರಕಾಶ್ ಹಾಗೂ ಪುರನ್‍ರಾಮ್ ಬಂಧಿತ ಆರೋಪಿಗಳು. ಇವರಿಂದ 8 ಕೆಜಿ 752 ಗ್ರಾಂ ಚಿನ್ನದ ಆಭರಣಗಳು, 3ಕೆಜಿ 870 ಗ್ರಾಂ ಬೆಳ್ಳಿಯ ಗಟ್ಟಿ, 53.48 ಲಕ್ಷ ರೂ.

ಹಣ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಿಜಾರಾಮ್‍ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ತಲೆ ಮರೆಸಿಕೊಂಡಿರುವ ಎರಡನೇ ಆರೋಪಿ ಓಂರಾಮ್ ದೇವಸಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.ಚಿಕ್ಕಪೇಟೆಯ ದೀಪಂ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜುಗ್‍ರಾಜ್ ಅವರ ಚಾಮರಾಜಪೇಟೆಯ ಮನೆ ಹಾಗೂ ಅಂಗಡಿಯಲ್ಲಿ ಆರು ತಿಂಗಳಿನಿಂದ ಪ್ರಮುಖ ಆರೋಪಿ, ರಾಜಸ್ತಾನ ಮೂಲದ ಬಿಜಾರಾಮ್ ಕೆಲಸ ಮಾಡಿಕೊಂಡು ಅವರ ವ್ಯವಹಾರಗಳನ್ನೆಲ್ಲಾ ತಿಳಿದು ಕೊಂಡಿದ್ದನು.

ಜುಗ್‍ರಾಜ್ ಅವರ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ, ಹಣ ಇರುವುದನ್ನು ತನ್ನ ಸಹಚರರಿಗೆ ಹೇಳಿದ್ದನು. ಅವರೆಲ್ಲಾ ಸೇರಿ ಹಣ, ಆಭರಣ ದೋಚಲು ಹಾಗೂ ಮಾಲೀಕನನ್ನು ಕೊಲೆ ಮಾಡಲು ಬಿಜಾರಾಮ್‍ಗೆ ಪ್ಲ್ಯಾನ್ ಹಾಕಿಕೊಟ್ಟಿದ್ದರು. ಅದರಂತೆ ಎರಡು ದಿನಗಳಿಂದ ಸಂಚು ರೂಪಿಸಿ, ಮೇ 24ರಂದು ರಾತ್ರಿ 9.30ರ ಸುಮಾರಿನಲ್ಲಿ ಅಂಗಡಿಯಿಂದ ಜುಗ್‍ರಾಜ್ ಅವರು ಮನೆಗೆ ಬಂದಾಗ ಅವರ ಜತೆಯೇ ಬಂದ ಬಿಜಾರಾಮ್ ಮೊದಲೇ ಮಾಡಿಕೊಂಡ ಸಂಚಿನಂತೆ ಮಾಲೀಕರ ಕಣ್ಣಿಗೆ ಖಾರದಪುಡಿ ಎರಚಿ, ಬಾಯಿಗೆ ಬಟ್ಟೆತುರುಕಿ, ಎರಡು ಕೈಗಳನ್ನು ಪ್ಲ್ಯಾಸ್ಟಿಕ್ ದಾರದಿಂದ ಹಿಂದಕ್ಕೆ ಕಟ್ಟಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.

ನಂತರ ಮನೆಯಲ್ಲಿದ್ದ ಅಪಾರ ಮೌಲ್ಯದ ಚಿನ್ನಾಭರಣ, ಬೆಳ್ಳಿಗಟ್ಟಿ ಹಾಗೂ ಹಣವನ್ನು ಮೂರು ಬ್ಯಾಗ್‍ಗಳಲ್ಲಿ ತುಂಬಿಕೊಂಡು ಗೋವಾಕ್ಕೆ ಪರಾರಿಯಾಗಿದ್ದನು. ಗೋವಾದಲ್ಲಿ ತನ್ನ ಸಹಚರರಾದ ಓಂರಾಮ್‍ದೇವಸಿ, ಮಹೇಂದ್ರ, ಓಂಪ್ರಕಾಶ್, ಪುರನ್‍ರಾಮ್ ಜತೆ ಸೇರಿ ಹಣ, ಆರಭಗಳನ್ನು ಹಂಚಿಕೊಂಡಿದ್ದಾರೆ. ಆರೋಪಿ ಸಹೋದರರಾದ ಮಹೇಂದ್ರ ಜ್ಯುವೆಲರಿ ಅಂಗಡಿ ಹಾಗೂ ಓಂಪ್ರಕಾಶ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡ ಚಾಮರಾಜಪೇಟೆ ಠಾಣೆ ಪೊಲೀಸರು ಆರೋಪಿ ಪತ್ತೆಗಾಗಿ ತಂಡವನ್ನು ರಚಿಸಿದ್ದರು. ಪೊಲೀಸರು ಎಲ್ಲ ರಾಜ್ಯಗಳಿಗೂ ಈ ಬಗ್ಗೆ ಮಾಹಿತಿ ರವಾನಿಸಿದ್ದರು. ಗುಜರಾತ್ ರಾಜ್ಯದ ಅಮೀರ್‍ಗಢದ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಟ್ರಕ್‍ವೊಂದು ಬಂದಿದೆ.

ಆ ಟ್ರಕ್‍ನ್ನು ಪರಿಶೀಲಿಸಿದಾಗ ಆರೋಪಿ ಬಿಜರಾಮ್ ಇರುವುದು ಗಮನಿಸಿ ವಶಕ್ಕೆ ಪಡೆದರು.ಆತನಿಂದ 8.48 ಲಕ್ಷ ರೂ. ನಗದು ಸೇರಿದಂತೆ 23.80 ಲಕ್ಷ ರೂ.

ಮೌಲ್ಯದ 252 ಗ್ರಾಂ ವಿವಿಧ ವಿನ್ಯಾಸಗಳ ಚಿನ್ನಾಭರಣಗಳು, 3ಕೆಜಿ 870 ಗ್ರಾಂ ಬೆಳ್ಳಿ ಗಟ್ಟಿಗಳು, ಕಳವು ಮಾಡಿದ್ದ ಹಣದಲ್ಲಿ ಖರೀದಿಸಿದ್ದ 40 ಸಾವಿರ ಬೆಲೆಯ ವಿವೋ ಮೊಬೈಲ್ ವಶಪಡಿಸಿಕೊಂಡು ಚಾಮರಾಜಪೇಟೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಚಾಮರಾಜಪೇಟೆ ಠಾಣೆಯ ಪೊಲೀಸರು ಗುಜರಾತ್‍ಗೆ ಹೋಗಿ ಬಾಡಿ ವಾರಂಟ್ ಮೇಲೆ ಆರೋಪಿಯನ್ನು ನಗರಕ್ಕೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತನ್ನ ಜೊತೆ ಇನ್ನೂ ನಾಲ್ವರು ಭಾಗಿಯಾಗಿದ್ದರು ಎಂದು ತಿಳಿಸಿದ್ದಾನೆ.

ಈತನ ಹೇಳಿಕೆ ಮೇರೆಗೆ ತನಿಖೆ ಮುಂದುವರೆಸಿದ ಪೊಲೀಸರು, 3ನೇ ಆರೋಪಿ ಪುರನ್‍ರಾಮ್ ಗೋವಾದಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿ ಆತನ ನಿವಾಸದಲ್ಲಿ ಬಂಧಿಸಿದ್ದಾರೆ.ಈತನಿಂದ 4.25 ಕೋಟಿ ರೂ. ಮೌಲ್ಯದ 8ಕೆಜಿ 500ಗ್ರಾಂ ತೂಕದ ಚಿನ್ನದ ನೆಕ್ಲೆಸ್‍ಗಳು, ಸರಗಳು, ಬಳೆಗಳು, ಮೂಗುತಿ, ಓಲೆ, ಜುಮುಕಿ, ಉಂಗುರಗಳು, ಬ್ರಾಸ್‍ಲೆಟ್‍ಗಳು ಹಾಗೂ ಇತರೆ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಮುಖ ಆರೋಪಿ ಬಿಜಾರಾಮ್ ಹಾಗೂ ಪುರನ್‍ರಾಮ್ ನೀಡಿದ ಮಾಹಿತಿ ಮೇರೆಗೆ ಸಹೋದರರಾದ ಮಹೇಂದ್ರ ಹಾಗೂ ಓಂಪ್ರಕಾಶ್‍ನನ್ನು ರಾಜಸ್ಥಾನದ ಕೀವಲ್ ಗ್ರಾಮದ ಅವರ ಮನೆಯಲ್ಲಿ ಬಂಧಿಸಿದ್ದಾರೆ.ಇವರಿಂದ 45 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ವಿವೋ, ಸ್ಯಾಮ್‍ಸಂಗ್ ಮತ್ತು ಲಾವ ಮೊಬೈಲ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಸಂಜೀವ್ ಎಂ ಪಾಟೀಲ, ಪ್ರಭಾರ ಉಪ ಪೊಲೀಸ್ ಆಯುಕ್ತರಾದ ಮೊಹಮ್ಮದ್ ಸುಜೀತ್, ಎಸಿಪಿ ಗಿರಿ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಎರ್ರಿಸ್ವಾಮಿ ಅವರ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ನಗರ ಪೊಲೀಸ್ ಆಯುಕ್ತ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಈ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button