ಜುಗ್‍ರಾಜ್ ಜೈನ್ ಕೊಲೆ ಕೇಸ್, ಹತ್ಯೆ ಹಿಂದಿನ ಕಾರಣ ಬಿಚ್ಚಿಟ್ಟ ಹಂತಕ ಬಿಜಾರಾಮ್

ದೀಪಂ ಎಲೆಕ್ಟ್ರಿಕಲ್ ಮಾಲೀಕ ಜುಗ್‍ರಾಜ್ ಅವರ ಮನೆಯಲ್ಲಿ ಪ್ರಮುಖ ಆರೋಪಿ ಬಿಜಾರಾಮ್ 15 ಸಾವಿರ ಸಂಬಳಕ್ಕೆ ಕೆಲಸ ಮಾಡಿಕೊಂಡಿದ್ದನು.
ಹಣ ತರುವಂತೆ ಬಿಜಾರಾಮ್‍ಗೆ ಆತನ ಪತ್ನಿ ಪೀಡಿಸುತ್ತಿದ್ದಳು. ಅದಕ್ಕಾಗಿ ಎಲ್ಲರೊಂದಿಗೆ ಸೇರಿ ಈ ಕೃತ್ಯ ಎಸಗಿರುವುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿ ಬಿಜಾರಾಮ್ ಮಾಲೀಕರಾದ ಜುಗ್‍ರಾಜ್ ಜೈನ್ ಅವರನ್ನು ಅಂಗಡಿಗೆ ಕರೆದುಕೊಂಡು ಹೋಗುವುದು ಮತ್ತು ಮನೆಗೆ ಕರೆದುಕೊಂಡು ಬರುತ್ತಿದ್ದನು.
ರಾತ್ರಿ ಜುಗ್‍ರಾಜ್ ಜೈನ್ ಅವರು ವಾಸವಿದ್ದ ಅಪಾರ್ಟ್‍ಮೆಂಟ್ ಕೆಳಗೆ ಮಲಗುತ್ತಿದ್ದನು. ಮಾಲೀಕರ ಚಲನವಲನಗಳನ್ನು ಆಲಿಸಿ ಅವರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಕೃತ್ಯ ಎಸಗಿದ್ದಾನೆ.
ಆರೋಪಿ ಬಿಜಾರಾಮ್ ಮಾಲೀಕನನ್ನು ಕೊಲೆ ಮಾಡಿದ ನಂತರ ಹಣ, ಆಭರಣಗಳನ್ನು ಮೂರು ಬ್ಯಾಗ್‍ಗಳಲ್ಲಿ ತುಂಬಿಕೊಂಡು ಚಾಮರಾಜಪೇಟೆಯಿಂದ ಚಿತ್ರದುರ್ಗಕ್ಕೆ ಬಸ್‍ನಲ್ಲಿ ಹೋಗಿದ್ದಾನೆ.
ಅಲ್ಲಿಂದ ಕಾರಿನಲ್ಲಿ ಹುಬ್ಬಳ್ಳಿಗೆ ತೆರಳಿದ್ದು, ತದನಂತರ ರೈಲು ಮೂಲಕ ಗೋವಾದಲ್ಲಿರುವ ಆರೋಪಿ ಪುರನ್‍ರಾಮ್‍ನ ರೂಮ್‍ಗೆ ಹೋಗಿದ್ದಾನೆ.
ಆತನ ರೂಮಿನಲ್ಲಿ ಸ್ವಲ್ಪ ಹಣ, ಚಿನ್ನಾಭರಣಗಳನ್ನು ಇಟ್ಟು ರಾಜಸ್ಥಾನಕ್ಕೆ ಆರೋಪಿಗಳು ಪರಾರಿಯಾಗಿದ್ದರು.
ಅಲ್ಲಿಂದ ವಿವಿಧ ಕಡೆ ಸುತ್ತಾಡಿಕೊಂಡು ಬಿಜಾರಾಮ್ ಗೋವಾಗೆ ಟ್ರಕ್‍ನಲ್ಲಿ ತೆರಳುತ್ತಿದ್ದ ವೇಳೆ ಗುಜರಾತ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.