ಜೀವ ಭಯದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ಕಾಶ್ಮೀರಿ ಉಗ್ರ ತಾಲಿಬ್ ಹುಸೇನ್

ಕಾಶ್ಮೀರಿ ಮೂಲದ ಉಗ್ರ ತಾಲಿಬ್ ಹುಸೇನ್ ಜೀವ ಭಯದಿಂದ ನಗರಕ್ಕೆ ಬಂದು ವಾಸವಾಗಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಗ್ರ ತಾಲಿಬ್ ಹುಸೇನ್ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದನು.ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂಬ ಹೋರಾಟ ಮಾಡುತ್ತಿರುವವರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯೂ ಒಂದು.
ಇದೇ ಸಂಘಟನೆಯಲ್ಲಿ ತಾಲಿಬ್ ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತಿದ್ದವರ ಪೈಕಿ ಈತನೂ ಒಬ್ಬನಾಗಿದ್ದ.
ಹಿಜ್ಬುಲ್ ಮುಜಾಹಿದ್ದೀನ್ ನಾಯಕರನ್ನು ಭಾರತೀಯ ಸೇನೆ ಸದೆಬಡೆಯುತ್ತಿದ್ದ ಸಂದರ್ಭದಲ್ಲಿ ಜೀವ ಭಯದಿಂದ ಈತ ಕಾಶ್ಮೀರದಿಂದ ತಲೆಮರೆಸಿಕೊಂಡು ಬಂದು ಬೆಂಗಳೂರಿನಲ್ಲಿ ನೆಲೆಸಿದ್ದನ್ನು ಜಮ್ಮುಕಾಶ್ಮೀರ ಪೊಲೀಸರು ಪತ್ತೆಹಚ್ಚಿದ್ದಾರೆ.
ನಗರದಲ್ಲಿ ಆತ ಕುಟುಂಬದೊಂದಿಗೆ ವಾಸವಾಗಿದ್ದ ಬಾಡಿಗೆ ಮನೆ ಮತ್ತು ಕೆಲಸ ಮಾಡುತ್ತಿದ್ದ ಜಾಗ ಹಾಗೂ ಮಸೀದಿಗೆ ಭೇಟಿ ನೀಡಿ ಪಾಠಪ್ರವಚನಗಳನ್ನು ನಡೆಸಿರುವ ಬಗ್ಗೆಯೂ ಸಹ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ನಗರದಲ್ಲಿ ನೆಲೆಸಿದ್ದ ಅವಧಿಯಲ್ಲಿ ಆತನ ಚಟುವಟಿಕೆಗಳ ಬಗ್ಗೆಯೂ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ನಗರದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳು ಹಾಗೂ ಹೊರವಲಯದಲ್ಲಿಯೂ ಭಯೋತ್ಪಾದಕ ನಿಗ್ರಹ ದಳ ನಿಗಾವಹಿಸಿದೆ.
2007-08ರಲ್ಲಿ ನಡೆದ ಹಲವು ಅಪರಾಧ ಕೃತ್ಯಗಳಲ್ಲಿ ತಾಲಿಬ್ ಭಾಗಿಯಾಗಿರುವ ಬಗ್ಗೆ ಜಮ್ಮುಕಾಶ್ಮೀರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಗ್ರ ತಾಲಿಬ್ ಹುಸೇನ್‍ನ್ನು ನಗರದಲ್ಲಿ ಬಂಧಿಸಿ ಕರೆದೊಯ್ದಿರುವ ಜಮ್ಮುಕಾಶ್ಮೀರ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
2016ರಿಂದ ಕಾಶ್ಮೀರದಲ್ಲಿ ನಡೆದ ಹಲವು ಗಲಭೆಗಳಲ್ಲಿ ಆತ ನಂಟು ಹೊಂದಿದ್ದ ಬಗ್ಗೆಯೂ ತನಿಖೆ ನಡೆಯುತ್ತಿದೆ ಹಾಗೂ ಗಲಭೆಗೆ ಯೋಜನೆ ಸಿದ್ದಪಡಿಸಲು ಬೆಂಗಳೂರಿಗೆ ಹಲವರು ಬಂದು ಹೋಗಿದ್ದಾರೆಂಬ ಬಗ್ಗೆಯೂ ಸಹ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.