ಜಾಗತಿಕವಾಗಿ ಹರಡಿದ ಮಂಗನ ಕಾಯಿಲೆ, ತುರ್ತುಸಭೆ ಕರೆದ ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಜಾಗತಿಕವಾಗಿ ಮಂಗನ ಕಾಯಿಲೆ ಪ್ರಕರಣಗಳು ಸಂಖ್ಯೆ 1,600 ಕ್ಕೆ ಏರಿರುವ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ತುರ್ತುಸಭೆಯನ್ನು ಕರೆದಿದೆ.
ಈ ಕುರಿತಾಗಿ ಜಿನೀವಾದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಈ ವರ್ಷ ಇದುವರೆಗೆ 1,600 ಕ್ಕೂ ಹೆಚ್ಚು ದೃಢಪಡಿಸಿದ ಪ್ರಕರಣಗಳು 39 ದೇಶಗಳಿಂದ ವರದಿಯಾಗಿವೆ, ಅಷ್ಟೇ ಅಲ್ಲದೆ ಸುಮಾರು 72 ಸಾವುಗಳು ಈ ಕಾಯಿಲೆಯಿಂದ ಉಂಟಾಗಿವೆ ಎಂದು ಹೇಳಿದ್ದಾರೆ.ಈಗ ಜಾಗತಿಕವಾಗಿ ವ್ಯಾಪಿಸುತ್ತಿರುವ ಈ ಕಾಯಿಲೆಯನ್ನು ಗಂಭೀರ ಎಂದು ಅವರು ಎಚ್ಚರಿಸಿದ್ದಾರೆ.
ಈಗ ಎಲ್ಲೆಡೆ ವ್ಯಾಪಿಸುತ್ತಿರುವ ಈ ಕಾಯಿಲೆ ಬಗ್ಗೆ ಚರ್ಚಿಸಲು ಮುಂದಿನ ವಾರದಂದು ಸಭೆಯನ್ನು ಕರೆಯಲಾಗಿದೆ ಎಂದು ಅವರು ತಿಳಿಸಿದರು.”ಈ ಏಕಾಏಕಿ ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಪ್ರತಿನಿಧಿಸುತ್ತದೆಯೇ ಎಂದು ನಿರ್ಣಯಿಸಲು ಮುಂದಿನ ವಾರ ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳ ಅಡಿಯಲ್ಲಿ ತುರ್ತು ಸಮಿತಿಯನ್ನು ಕರೆಯಲು ನಾನು ನಿರ್ಧರಿಸಿದ್ದೇನೆ” ಎಂದು ಟೆಡ್ರೊಸ್ ಹೇಳಿದ್ದಾರೆ.
ಸೋಂಕಿತ ರೋಗಿಗಳ ಕಣ್ಗಾವಲು, ಸಂಪರ್ಕ-ಪತ್ತೆಹಚ್ಚುವಿಕೆ ಮತ್ತು ಪ್ರತ್ಯೇಕತೆ ಸೇರಿದಂತೆ ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಸಾರ್ವಜನಿಕ ಆರೋಗ್ಯ ಸಾಧನಗಳೊಂದಿಗೆ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗ ರೋಗ ಪೀಡಿತ ದೇಶಗಳನ್ನು ಬೆಂಬಲಿಸುವುದು ವಿಶ್ವ ಆರೋಗ್ಯ ಸಂಸ್ಥೆ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.