ಜಯಲಲಿತಾ ಸಾವು ಕುರಿತ ಆರ್ಮುಗಸ್ವಾಮಿ ಸಮಿತಿ ವರದಿ ಸಲ್ಲಿಕೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತ ಅವರ ಸಾವಿನ ಕುರಿತು ತನಿಖೆಗಾಗಿ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎ.ಆರ್ಮುಗಸ್ವಾಮಿ ಅವರ ಸಮಿತಿ ಇಂದು ವರದಿ ಸಲ್ಲಿಸಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಖುದ್ದು ನ್ಯಾಯಮೂರ್ತಿಗಳೇ ಇಂದು ವರದಿಯನ್ನು ಸಲ್ಲಿಸಿದ್ದಾರೆ.ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತ ಅವರು ಅಸ್ವಸ್ಥರಾಗಿ 2016ರ ಸೆ.22ರಂದು ಚೆನ್ನೈ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು.
ಅದೇ ವರ್ಷ ಡಿಸೆಂಬರ್ 5ರಂದು ನಿಧನರಾದರು. 75 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಜಯಲಲಿತ ಅವರಿಗೆ ನೀಡಲಾದ ಚಿಕಿತ್ಸೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಸಾವಿನ ಬಗ್ಗೆ ಕೂಡ ಅನುಮಾನಗಳು ಹರಿದಾಡಲಾರಂಭಿಸಿದವು.
ಈ ಹಿನ್ನೆಲೆಯಲ್ಲಿ ಆಗಿನ ಮುಖ್ಯಮಂತ್ರಿ ಯಡಪ್ಪಾಡಿ ಪಳನಿಸ್ವಾಮಿ ಅವರು, ಆರ್ಮಗಸ್ವಾಮಿ ಅವರ ನೇತೃತ್ವದಲ್ಲಿ 2017ರ ಸೆ.25ರಂದು ಸಮಿತಿ ರಚನೆ ಮಾಡಿದ್ದರು. ಅದೇ ವರ್ಷ ನ.22ರಿಂದ ವಿಚಾರಣೆ ಆರಂಭಿಸಲಾಗಿತ್ತು.
ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಸಂದರ್ಭದಿಂದ ಆರಂಭಿಸಿ ಆಸ್ಪತ್ರೆಯಲ್ಲಿ ನೀಡಲಾದ ಸಮರ್ಪಕ, ಸಮರ್ಪಕ ಚಿಕಿತ್ಸೆಗಳು ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ವಿಚಾರಣೆ ನಡೆಸಲಾಗಿತ್ತು.
ಮೊದಲ ಹಂತದಲ್ಲಿ 13 ತಿಂಗಳ ಕಾಲ 147 ಸಭೆಗಳಲ್ಲಿ 154 ಸಾಕ್ಷ್ಯಗಳನ್ನು ವಿಚಾರಣೆಗೊಳಪಡಿಸಿತ್ತು. ಆದರೆ ಸಮಿತಿ ವಿಚಾರಣೆಯನ್ನು ಪ್ರಶ್ನಿಸಿ ಅಪೊಲೋ ಆಸ್ಪತ್ರೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. 2019ರ ಏ.26ರಂದು ಉನ್ನತ ನ್ಯಾಯಾಲಯ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಿತ್ತು.
ತನಿಖಾ ಸಮಿತಿಯಲ್ಲಿ ತಜ್ಞ ವೈದ್ಯರಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಅಖಿಲ ಭಾರತ ವೈದ್ಯಕೀಯ ಸಂಸ್ಥೆ ತಜ್ಞ ವೈದ್ಯರ ತಂಡವನ್ನು ಸಮಿತಿಯ ನೆರವಿಗಾಗಿ ನಿಯೋಜಿಸಿ, ಸುಮಾರು ಮೂರು ವರ್ಷಗಳ ಬಳಿಕ 2022ರ ಮಾ.7ರಂದು ತಡೆಯಾಜ್ಞೆ ತೆರವುಗೊಂಡಿತ್ತು. ಬಳಿಕ ಮೂರನೇ ಹಂತದಲ್ಲಿ 12 ವಾರಗಳ ಕಾಲ ವಿಚಾರಣೆ ನಡೆಸಲಾಗಿದೆ.
ತಜ್ಞರ ಸಮಿತಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆ ಯಾವುದೇ ಲೋಪವಾಗಿಲ್ಲ ಎಂಬ ಅಭಿಪ್ರಾಯದ ಮೂಲಕ ಕ್ಲೀನ್‍ಚಿಟ್ ನೀಡಿದೆ. ಮುಖ್ಯಮಂತ್ರಿಯಾಗಿದ್ದ ಓ.ಪನ್ನೀರ್ ಸೆಲ್ವಂ, ಜಯಲಲಿತಾರ ಆಪ್ತರಾಗಿದ್ದ ಶಶಿಕಲಾ, ಜೆ.ಇಳವರಸಿ, ಹಲವು ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ 150ಕ್ಕೂ ಹೆಚ್ಚು ಮಂದಿಯನ್ನು ಸಮಿತಿ ವಿಚಾರಣೆ ನಡೆಸಿದೆ. ಅಂತಿಮವಾಗಿ ಸಿದ್ದಗೊಂಡ ವರದಿಯನ್ನು ಇಂದು ಸರ್ಕಾರಕ್ಕೆ ಸಲ್ಲಿಸಲಾಗಿದೆ.