ರಾಷ್ಟ್ರಿಯ

ಜಮ್ಮು ಮತ್ತು ಕಾಶ್ಮೀರದ ಅಮರನಾಥದ ಗುಹೆಯ ದೇಗುಲದ ಬಳಿ ಮೇಘಸ್ಫೋಟ : 13 ಮಂದಿ ಬಲಿ, ಹಲವರು ನಾಪತ್ತೆ

ಶ್ರೀನಗರ: ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಖ್ಯಾತ ಪವಿತ್ರ ಯಾತ್ರಾಸ್ಥಳ ಅಮರನಾಥ ಗುಹೆ ಬಳಿ ಶುಕ್ರವಾರ ಮೇಘ ಸ್ಫೋಟ ಸಂಭವಿಸಿದೆ. ಇಲ್ಲಿನ ಬೇಸ್ ಕ್ಯಾಂಪ್‌ನಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಅಮರನಾಥದ ಗುಹೆಯ ದೇಗುಲದ ಬಳಿ ಮೇಘಸ್ಫೋಟ ಸಂಭವಿಸಿದ್ದರ ಪರಿಣಾಮ ದಿಢೀರ್ ಪ್ರವಾಹ ಉಂಟಾಗಿದೆ. ಇಲ್ಲಿನ ಬೇಸ್‌ ಕ್ಯಾಂಪ್‌ನಲ್ಲಿದ್ದ ಮಹಿಳೆಯರು, ಪುರುಷರು ಸೇರಿದಂತೆ ಕನಿಷ್ಠ 13 ಮಂದಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಶುಕ್ರವಾರ ಸಂಜೆ 5:30ರ ವೇಳೆಗೆ ಮೇಘಸ್ಫೋಟ ಸಂಭವಿಸಿದೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾಗಿದೆ. ಗುಹೆಯ ಬಳಿಯೇ ಇದ್ದ ಬೇಸ್‌ ಕ್ಯಾಂಪಿನಲ್ಲಿದ್ದ ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ಯಾತ್ರೆ ಮಾರ್ಗದಲ್ಲಿರುವ ಸಮುದಾಯ ಅಡುಗೆ ಕೋಣೆಗಳು ಮತ್ತು ಟೆಂಟ್‌ಗಳು ಕೊಚ್ಚಿ ಹೋಗಿವೆ.

ಸೇನಾ ಮೂಲಗಳ ಪ್ರಕಾರ ಮೇಘಸ್ಫೋಟ ಮತ್ತು ಅದರ ಬಳಿಕದ ಪ್ರವಾಹದಿಂದಾಗಿ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಅಂತೆಯೇ ಪ್ರವಾಹದ ನೀರು ನೇರವಾಗಿ ಯಾತ್ರಿಕರು ತಂಗಿದ್ದ ಟೆಂಟ್‌ಗಳತ್ತ ನುಗ್ಗಿದ್ದು, ಸಾವು-ನೋವಿನ ಪ್ರಮಾಣ ಮತ್ತಷ್ಟು ಹೆಚ್ಚುವ ಅತಂಕ ಎದುರಾಗಿದೆ. ಪ್ರಸ್ತುತ ಗಾಯಾಳುಗಳನ್ನು ಚಿಕಿತ್ಸೆಗಾಗಿ ಏರ್ ಲಿಫ್ಟ್ ಮಾಡಲಾಗುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಮತ್ತು ಇತರ ಏಜೆನ್ಸಿಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಪ್ರವಾಹ ಮತ್ತು ಮೇಘಸ್ಫೋಟದ ಹೊರತಾಗಿಯೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 2 ವರ್ಷಗಳಿಂದ ಕೋವಿಡ್ ಕಾರಣಕ್ಕೆ ತೀರ್ಥಯಾತ್ರೆ ಸ್ಥಗಿತಗೊಂಡಿತ್ತು. ಈ ವರ್ಷ ಜೂನ್ 30 ರಂದು ತೀರ್ಥಯಾತ್ರೆ ಪ್ರಾರಂಭವಾಗಿತ್ತು. ಈ ಹಿಂದೆ ಪ್ರತಿಕೂಲ ಹವಾಮಾನದ ಕಾರಣ ಅಮರನಾಥ ಯಾತ್ರೆಯನ್ನು ಈ ವಾರದ ಆರಂಭದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ 72,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ದೇಗುಲದಲ್ಲಿ ತಮ್ಮ ಪೂಜೆ ಸಲ್ಲಿಸಿದ್ದಾರೆ. ಯಾತ್ರೆಯು ಆಗಸ್ಟ್ 11 ರಂದು ಕೊನೆಗೊಳ್ಳಲಿದೆ.

Related Articles

Leave a Reply

Your email address will not be published. Required fields are marked *

Back to top button