ರಾಜಕೀಯ

ಜನಸಾಗರ ಕಂಡು ಸ್ಥಿಮಿತ ಕಳೆದುಕೊಂಡ ಸಿದ್ದು

ಮಂಗಳೂರಿನಲ್ಲಿ ಜನಮನ್ನಣೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಅಪಾರ ಜನಸಂದಣಿಯ ಕಾರ್ಯಕ್ರಮ ಮತ್ತು ದೊಡ್ಡಬಳ್ಳಾಪುರದ ಜನಸ್ಪಂದನಕ್ಕೆ ಸ್ವಯಂಪ್ರೇರಿತ ಜನಸಾಗರವನ್ನು ಗಮನಿಸಿ ಸಿದ್ದರಾಮಯ್ಯರು ಸ್ಥಿಮಿತ ಕಳೆದುಕೊಂಡಂತಿದೆ.

ಅದಕ್ಕಾಗಿಯೇ ಅವರು ತಮ್ಮ ಸುಳ್ಳಿನ ಸರಮಾಲೆ, ವ್ಯರ್ಥ ಆರೋಪಗಳ ಮೂಲಕ ನಾಟಕ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕನ್ನಡನಾಡಿನ ಜನತೆ ನಿರ್ಧರಿಸಿದ್ದು, ಅಧಿಕಾರ ಗಳಿಸುವ ಕಾಂಗ್ರೆಸ್ಸಿಗರ ಕನಸು ಕೇವಲ ಹಗಲುಗನಸಾಗಿ ಉಳಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಜನರು ಸೋಲಿಸಿ ರಾಜಕೀಯವಾಗಿ ಮೂಲೆಗುಂಪಾಗುವಂತೆ ಮಾಡಲಿದ್ದಾರೆ. ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಎಂದು ನಳಿನ್‌ಕುಮಾರ್ ಕಟೀಲ್ ಅವರು ದೃಢವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸಿದ್ದರಾಮಯ್ಯ ಎಂದರೆ ಡೋಂಗಿತನ, ಹಿಂದೂ ವಿರೋಧಿತನದ ಸಂಕೇತ.

ರಾಷ್ಟ್ರವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸುವ ಮತ್ತು ಧರ್ಮಗಳನ್ನು ಒಡೆಯುವ ಸಿದ್ದರಾಮಯ್ಯರ ಸ್ವಾರ್ಥ ರಾಜಕಾರಣ ಜನರಿಗೆ ಸ್ಪಷ್ಟವಾಗಿ ತಿಳಿದಿದೆ. ನೀವು ಟ್ವೀಟ್‌ಗಳ ಮೂಲಕ ಹಾಗೂ ಹೇಳಿಕೆಗಳ ಮೂಲಕ ನಿಮ್ಮನ್ನೇ ನೀವು ಜನರ ಮುಂದಿಟ್ಟು ಅಪಹಾಸ್ಯಕ್ಕೆ ಸಿಲುಕುತ್ತಿದ್ದೀರಿ. ಬಿಜೆಪಿ ಸರಕಾರ ಜನಪರವಾಗಿದೆ.

ಬಿಜೆಪಿ ಯಾವತ್ತೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಮತ್ತು ಸಶಕ್ತೀಕರಣದ ಪ್ರಯತ್ನದಲ್ಲಿರುವುದು ಜನರಿಗೆ ತಿಳಿದಿದೆ ಎಂದು ಅವರು ತಿಳಿಸಿದ್ದಾರೆ.ಕಾಮನ್ ಮ್ಯಾನ್ ಸಿಎಂ ಖ್ಯಾತಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರವು ಬೆಂಗಳೂರಿನ ಅಭಿವೃದ್ಧಿಗೆ ೬ ಸಾವಿರ ಕೋಟಿ ಮೊತ್ತವನ್ನು ನೀಡಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ಕಳೆದ ಹಲವು ದಶಕಗಳಲ್ಲೇ ಅತ್ಯಧಿಕ ಮಳೆ ಭಾರತದಾದ್ಯಂತ ಮತ್ತು ಬೆಂಗಳೂರಿನಲ್ಲೂ ಬಂದಿದೆ. ಮಳೆ- ಅತಿವೃಷ್ಟಿಯನ್ನು ಎದುರಿಸಲು ಬಿಜೆಪಿ ತಕ್ಷಣವೇ ಮುಂದಾಗಿದ್ದು, ಜನರ ಬದುಕನ್ನು ಕಟ್ಟಿಕೊಡಲು ಕೂಡಲೇ ಸ್ಪಂದಿಸಿದೆ. ಸರಕಾರ ಒಂದೆಡೆ ಮತ್ತು ಪಕ್ಷ ಮತ್ತೊಂದೆಡೆ ಅಗತ್ಯ ಸೇವಾ ಕಾರ್ಯಗಳನ್ನು ಕೈಗೊಂಡಿವೆ ಎಂದು ವಿವರಿಸಿದ್ದಾರೆ.ಒಮ್ಮೆ ನಿರುದ್ಯೋಗ ಸಮಸ್ಯೆ ಎನ್ನುವ ಸಿದ್ದರಾಮಣ್ಣ, ಮತ್ತೆ ಪ್ಲೇಟ್ ಬದಲಿಸಿ ಶೇಕಡಾ ೪೦ ಭ್ರಷ್ಟಾಚಾರ ಎಂದು ರಾಗ ಎಳೆಯುತ್ತಾರೆ.

ಅರ್ಕಾವತಿ ಹಗರಣ ಸೇರಿ ವಿವಿಧ ಭ್ರಷ್ಟಾಚಾರ ಹಗರಣಗಳನ್ನು ಬಿಜೆಪಿ ಸರಕಾರ ಬಯಲಿಗೆ ಎಳೆಯಲಿದೆ ಎಂದು ತಿಳಿಸಿದ ಬಳಿಕ ಸಿದ್ದರಾಮಣ್ಣನಿಗೆ ಚಳಿಜ್ವರ ಬಂದಂತಿದೆ; ಅದಕ್ಕಾಗಿಯೇ ಸದಾ ಪ್ರಚಾರದಲ್ಲಿರಲು ಸುಳ್ಳು ಸುಳ್ಳು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.ನಮ್ಮ ಸರಕಾರವು ಮಳೆಹಾನಿಗೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ಹೆಚ್ಚು ಮಾಡಿದೆ. ೫ ಲಕ್ಷದಂತೆ ಪರಿಹಾರ ಕೊಟ್ಟಿದೆ.

ಕಾಂಗ್ರೆಸ್ ಅವಧಿಯಲ್ಲಿ ಆದ ರಾಜಕಾಲುವೆ ಒತ್ತುವರಿ ಮತ್ತು ಆ ಸಮಸ್ಯೆ ಪರಿಹರಿಸುವ ದೃಷ್ಟಿಯಿಂದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಟ್ಟಿದೆ. ಇದರ ಕೆಲಸವೂ ನಡೆಯುತ್ತಿದೆ. ಆದರೆ, ಸಿದ್ದರಾಮಯ್ಯರ ಕಣ್ಣಿಗೆ ಪೊರೆ ಬಂದಂತಿದೆ; ಅವರು ಕಪ್ಪು ಕನ್ನಡಕ ಹಾಕಿದ್ದರಿಂದ ಅಭಿವೃದ್ಧಿ ಕಾರ್ಯಗಳನ್ನು ಕಂಡೂ ಕಾಣದಂತೆ ಜಾಣಗುರುಡರಾಗಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button