ಜನರ ವಿಶ್ವಾಸ ಗಳಿಸಲು ಸಂಕಲ್ಪಯಾತ್ರೆ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಇಂದಿನಿಂದ ರಾಜ್ಯಾದ್ಯಂತ ಬಿಜೆಪಿಯ ಜನಸಂಕಲ್ಪ ಯಾತ್ರೆ ಆರಂಭವಾಗಿದೆ.
ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ಜನಸಂಕಲ್ಪ ಯಾತ್ರೆಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಜೆಪಿಯ ಹಿರಿಯ ನಾಯಕರಾದ ಯಡಿಯೂರಪ್ಪರವರ ನೇತೃತ್ವದಲ್ಲಿ ಜನಸಂಕಲ್ಪಯಾತ್ರೆಯನ್ನು ಇಂದಿನಿಂದ ಆರಂಭಿಸುತ್ತಿದ್ದೇವೆ.
ಈ ಯಾತ್ರೆಯ ಮೂಲಕ ಮತ್ತೊಮ್ಮೆ ಜನರ ವಿಶ್ವಾಸ ಗಳಿಸಿ ೨೦೨೩ರ ಚುನಾವಣೆಯಲ್ಲಿ ವಿಜಯಶಾಲಿಯಾಗಿ iತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.ರಾಜ್ಯ ಮತ್ತು ಕೇಂದ್ರದ ಜನಪರ ಯೋಜನೆಗಳನ್ನು ಜನತೆಗೆ ತಿಳಿಸುವ ಉದ್ದೇಶ ಈ ಜನಸಂಕಲ್ಪ ಯಾತ್ರೆಯದ್ದಾಗಿದೆ. ಪ್ರತಿ ಕ್ಷೇತ್ರದಲ್ಲೂ ಸಾವಿರಾರು ಮಂದಿ ಬಿಜೆಪಿ ಸರ್ಕಾರದ ಯೋಜನೆಗಳ ಲಾಭ ಗಳಿಸಿದ್ದಾರೆ.
ಅವುಗಳನ್ನೆಲ್ಲ ಜನರಿಗೆ ಮನವರಿಕೆ ಮಾಡಲು ಜನಸಂಕಲ್ಪಯಾತ್ರೆ ನಡೆಸಿದ್ದೇವೆ ಎಂದರು.ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ಯೋಜನೆಗಳು, ನೀತಿಗಳು ಅದರಿಂದ ಆಗಿರುವ ಲಾಭ ಮುಂದೆ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸುವ ಯೋಜನೆಗಳು ಎಲ್ಲವನ್ನೂ ಈ ಜನಸಂಕಲ್ಪಯಾತ್ರೆಯಲ್ಲಿ ಜನರ ಮುಂದೆ ಇಡುತ್ತೇವೆ ಎಂದರು.
ಮುಂದಿನ ಚುನಾವಣೆಗೆ ಈಗಿನಿಂದಲೇ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರನ್ನು ಅಣಿಗೊಳಿಸುವ ಉದ್ದೇಶವೂ ಈ ಯಾತ್ರೆಯದ್ದಾಗಿದೆ ಎಂದ ಅವರು, ಎಲ್ಲೆಡೆ ಕಾರ್ಯಕರ್ತರಲ್ಲಿ ಉತ್ಸಾಹ, ಹುರುಪು ಇದೆ. ಈ ಯಾತ್ರೆಯ ಮೂಲಕ ಮತ್ತೊಮ್ಮೆ ಜನರ ವಿಶ್ವಾಸ ಗಳಿಸುತ್ತೇವೆ.
ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಪುನರುಚ್ಛರಿಸಿದರು.ಈ ಯಾತ್ರೆ ಪ್ರತಿದಿನ ಎರಡು ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದ್ದು, ಸಮಾವೇಶಗಳು, ಕಾರ್ಯಕರ್ತರ ಸಭೆಗಳು ನಡೆಯಲಿದೆ. ಪ್ರತಿದಿನ ಮೂರು ಕ್ಷೇತ್ರದಲ್ಲಿ ಸಮಾವೇಶ ನಡೆಸಿ ಎಂಬ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಯಾತ್ರೆ ನಡೆಸುತ್ತೇವೆ.
ಈ ಯಾತ್ರೆ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳ ಭೇಟಿ, ಸಂವಾದವು ಇರುತ್ತದೆ ಎಂದರು.ಯಾತ್ರೆಗೆ ಜೊತೆಯಾಗಿ ಹೊರಟ ಸಿಎಂ-ಬಿಎಸ್‌ವೈಬಿಜೆಪಿಯ ಜನಸಂಕಲ್ಪಯಾತ್ರೆ ಇಂದು ರಾಯಚೂರಿನಲ್ಲಿ ನಡೆಯಲಿದ್ದು, ಈ ಯಾತ್ರೆಯಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್‌ಎಎಲ್ ವಿಮಾನನಿಲ್ದಾಣದಿಂದ ಜತೆಯಾಗಿಯೇ ತೆರಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಬೆಳಿಗ್ಗೆ ತಮ್ಮ ಆರ್‌ಟಿ ನಗರದ ನಿವಾಸದಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಕಾವೇರಿ ನಿವಾಸಕ್ಕೆ ಆಗಮಿಸಿ ಅಲ್ಲಿಂದ ಜತೆಯಾಗಿಯೇ ಏರ್‌ಪೋರ್ಟ್‌ಗೆ ತೆರಳಿದ್ದು ವಿಶೇಷವಾಗಿತ್ತು.