ಚೆನ್ನೈನಲ್ಲಿ ಭಾರೀ ಮಳೆ ಶಾಲಾ-ಕಾಲೇಜಿಗೆ ರಜೆ

ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಚೆನ್ನೈನ ಕೆಲವು ಭಾಗಗಳಲ್ಲಿ ಇಂದು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜತೆಗೆ ಹವಾಮಾನ ಪರಿಸ್ಥಿತಿಯ ದೃಷ್ಟಿಯಿಂದ ತಮಿಳುನಾಡು ಹಾಗೂ ಪುದುಚೇರಿಯ ೧೪ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಚೆನ್ನೈ ಹೊರತುಪಡಿಸಿ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು, ರಾಣಿಪೇಟ್, ವೆಲ್ಲೂರು, ಸೇಲಂ, ನಾಮಕ್ಕಲ್, ತಿರುವಣ್ಣಾಮಲೈ, ಕಲ್ಲಕುರಿಚಿ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಮಳೆ ರಜೆ ಘೋಷಿಸಲಾಗಿದೆ.
ಹವಾಮಾನ ಇಲಾಖೆಯು ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ ಹಾಗೂ ಅಧಿಕಾರಿಗಳು ಚೆನ್ನೈನಲ್ಲಿ ೧೬೯ ಸೇರಿದಂತೆ ೫,೦೯೩ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದಾರೆ.
ನಗರದ ತಗ್ಗು ಪ್ರದೇಶಗಳಲ್ಲಿ ೮೭೯ ಒಳಚರಂಡಿ ಪಂಪ್‌ಗಳನ್ನು ನಿಯೋಜಿಸಲಾಗಿದೆ ಹಾಗೂ ೬೦ ಮೇಲ್ವಿಚಾರಣಾ ಅಧಿಕಾರಿಗಳು ಪೀಡಿತ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಗಳ ೨,೦೦೦ ಕ್ಕೂ ಹೆಚ್ಚು ಪರಿಹಾರ ಸಿಬ್ಬಂದಿ ಸರ್ವ ಸನ್ನದ್ಧರಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.