ಚೀನಿ ಆ್ಯಪ್ ಗಳಿಂದ ಅಲ್ಪಾವಧಿಗೆ ಲೋನ್ ನೀಡಿ ವಂಚನೆ ಪ್ರಕರಣ… 6.17 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED…

ಬೆಂಗಳೂರು: ಚೀನಾ ಆ್ಯಪ್ ಗಳಿಂದ ಅಲ್ಪಾವಧಿಗೆ ಲೋನ್ ನೀಡಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವರು 6.17 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.ಬೆಂಗಳೂರಿನ ಮಾರತ್ ಹಳ್ಳಿ ಮತ್ತು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. PMLA 2002 ಅಡಿಯಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ತನಿಖೆಯಲ್ಲಿ ಆರೋಪಿಗಳು ಚೀನಾದ ಪ್ರಜೆಗಳೊಂದಿಗೆ ಸೇರಿ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಅಕ್ರಮ ವಹಿವಾಟು ನಡೆಸಿರುವುದು ಬೆಳಕಿಗೆಬಂದಿತ್ತು. ಇವರು ಸಾಲ ನೀಡಿಕೆ ಜೊತೆಯಲ್ಲೇ ಕ್ಯಾಶ್ ಮಾಸ್ಟರ್, ಕ್ರೇಜಿ ರೂಪಾಯಿ, ಕ್ಯಾಶಿನ್, ರುಪೇ ಮೆನು ಮುಂತಾದ ಮೊಬೈಲ್ ಆ್ಯಪ್‌ಗಳ ಮೂಲಕ ಹೂಡಿಕೆ ಮಾಡಿಸಿಕೊಂಡಿದ್ದರು.ಈ ಕಂಪನಿಗಳು ಕೋವಿಡ್ ಸಮಯದಲ್ಲಿ ಅಲ್ಪಾವಧಿಗೆ ಲೋನ್ ನೀಡುತ್ತೇವೆ ಎಂದು ಸಾರ್ವಜನಿಕರಿಗೆ ವಂಚನೆ ಮಾಡಿದ್ದವು. ಭಾರತದ ಯುವಕರ ಕೆವೈಸಿ ದಾಖಲೆಗಳನ್ನು ಬಳಸಿಕೊಂಡು ಈ ಕಂಪನಿಗಳನ್ನು ಭಾರತದಲ್ಲಿ ತೆರೆಯಲಾಗಿತ್ತು. ಬಳಿಕ ಯುವಕರನ್ನ ಲೋನ್ ನೀಡುವ ಕಂಪನಿಗಳಿಗೆ MD/ CEO ಗಳಾಗಿ ನೇಮಕ ಮಾಡಲಾಗಿತ್ತು. ಈ ಕಂಪನಿಗಳು ಆ್ಯಪ್ ಮೂಲಕ ಅಲ್ಪಾವಧಿಗೆ ಲೋನ್ ನೀಡುತ್ತಿದ್ದವು. ಲೋನ್ ಪಡೆದ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿದರ, ಸಂಸ್ಕರಣ ಶುಲ್ಕ ವನ್ನು ಅಕ್ರಮವಾಗಿ ವಿಧಿಸಿ ವಸೂಲಿ ಮಾಡುತ್ತಿದ್ದವು. ಚೀನೀ ಕಂಪನಿಗಳು ಹೆಚ್ಚಾಗಿ ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದವು. ತನಿಖೆಯ ಸಂದರ್ಭದಲ್ಲಿ, ಕಂಪನಿಗಳು ವಿದೇಶಕ್ಕೆ ಹಣವನ್ನು ರವಾನೆ ಮಾಡಿರುವುದು ಕೂಡ ಬಹಿರಂಗವಾಗಿತ್ತು.