ರಾಜ್ಯ

ಚಿಕ್ಕಬಳ್ಳಾಪುರದಲ್ಲಿ ಕೋಡಿಬಿದ್ದ ಬಹುತೇಕ ಡ್ಯಾಂ, ಕೆರೆಗಳು

ಚಿಕ್ಕಬಳ್ಳಾಪುರ:ಹಲವು ದಶಕಗಳ ನಂತರ ಜಿಲ್ಲೆಯ ಬಹುತೇಕ ಡ್ಯಾಂ, ಕೆರೆಗಳು ಕೋಡಿಬಿದ್ದಿವೆ. ಇನ್ನು ಕೆಲವು ಕೋಡಿ ಬೀಳಲು ಕ್ಷಣಗಣನೆ ಶುರುವಾಗಿದೆ.

ಆದರೆ ಕೆರೆ ಮತ್ತು ಜಲಾಶಯ ಕೋಡಿಗಳ ಜಲವೈಭವವೇ ಈಗ ಹಲವರ ಸಾವಿಗೆ ಕಾರಣವಾಗಿದ್ದು, ಡೇಂಜರ್‌ ಸ್ಪಾಟ್‌ ಗಳಾಗಿ ಪರಿವರ್ತನೆಯಾಗಿವೆ.

ಜಿಲ್ಲೆಯ ಶ್ರೀನಿವಾಸಸಾಗರ, ಜಕ್ಕಲಮೊಡಗು, ಮಂಚೇನಹಳ್ಳಿ, ಅಮಾನಿ ಭೈರಸಾಗರ, ಚಿತ್ರಾವತಿ, ಪಿನಾಕಿನಿ, ಪಾಲರ್‌, ಅಮ್ಮನ ಕೆರೆ, ಗೋಪಾಲಕೃಷ್ಣ ಕೆರೆ ಹೀಗೆ ಬಹುತೇಕ ಕೆರೆಗಳು ಕೋಡಿ ಬಿದ್ದಿದ್ದು, ಪ್ರವಾಸಿಗರ ಹಾಟ್‌ ಸ್ಪಾಟ್‌ಗಳಾಗಿವೆ.

ಪ್ರತಿ ವೀಕೆಂಡ್‌ನಲ್ಲಿ ಈ ಕೆರೆಗಳ ಸೌಂದರ್ಯ ಸವಿಯಲು ನೂರಾರು ಜನರು ಬರುತ್ತಿದ್ದಾರೆ. ಅದರಲ್ಲೂ ಶ್ರೀನಿವಾಸಸಾಗರ, ಅಮಾನಿಬೈರಸಾಗರ ಕೆರೆ ನೋಡಲು ಬರುವವರ ಸಂಖ್ಯೆ ಹೆಚ್ಚು.

ವೀಕೆಂಡ್‌ನಲ್ಲಿ ಪ್ರವಾಸಿಗರ ಲಗ್ಗೆ: ರಾಜ್ಯ ರಾಜಧಾನಿ ಬೆಂಗಳೂರು ಸಮೀಪದಲ್ಲಿರುವುದರಿಂದ ಹೆಚ್ಚಿನ ಜನ ಜಿಲ್ಲೆಯ ಕೆರೆಗಳ ಸೌಂದರ್ಯ ಸವಿಯಲು ಬರುತ್ತಿದ್ದಾರೆ. ಇನ್ನೊಂದೆಡೆ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆಗೆ ನಿರ್ಬಂಧ ಹೇರಲಾಗಿದೆ.

ವೀಕೆಂಡ್‌ನಲ್ಲಿ ಒಂದು ಬಾರಿಗೆ 300 ಮಂದಿಗೆ ಮಾತ್ರ ಅವಕಾಶ ನೀಡುತ್ತಿರುವ ಹಿನ್ನೆಲೆ ಸಾಲಿನಲ್ಲಿ ನಿಲ್ಲುವ ಪ್ರವಾಸಿಗರು ಈ ಕೆರೆಗಳ ಕಡೆ ಬರುತ್ತಿದ್ದಾರೆ.

ಇನ್ನು ರಭಸವಾಗಿ ಹರಿಯುವ ಕೋಡಿ ನೀರಿನಲ್ಲಿ ಈಜಾಡುವುದು, ಮೋಜು ಮಸ್ತಿ ಮಾಡುವುದು ಕೂಡಾ ನಡೆಯುತ್ತಿದೆ. ಇನ್ನೊಂದೆಡೆ ಸೆಲ್ಫಿ ಗೀಳು ಕೂಡಾ ಹೆಚ್ಚಾಗಿದೆ.

ಕೆರೆಗಳ ಕೋಡಿ ಜೊತೆಗೆ ಪಕ್ಕದಲ್ಲೇ ಇರುವ ಕಲ್ಯಾಣಿಗಳು ಮತ್ತು ಸಣ್ಣ-ಸಣ್ಣ ಹಳ್ಳಗಳಲ್ಲೂ ಈಜಲು ಹೋಗುತ್ತಿದ್ದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಜಿಲ್ಲೆಯ ಹಲವೆಡೆ ಕೆರೆಗಳ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಗಳು ನಡೆದಿದ್ದು ಆತಂಕ ಹೆಚ್ಚಿಸಿದೆ.

ಶ್ರೀನಿವಾಸ ಸಾಗರ ಡ್ಯಾಂನಲ್ಲಿ ಇತ್ತೀಚೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಶನಿವಾರ ಈಜಲು ಹೋದ ವೈದ್ಯಕೀಯ ವಿದ್ಯಾರ್ಥಿ ಹಾಗೂ ಆತನನ್ನು ರಕ್ಷಿಸಲು ಹೋದ ಚಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಗುಡಿಬಂಡೆ ತಾಲೂಕಿನ ಜಂಬಿಗೆ ಮರದಹಳ್ಳಿಯಲ್ಲಿ ನೆಂಟರ ಮನೆಗೆ ಬಂದಿದ್ದ ಬಾಲಕಿಯೊಬ್ಬಳು ತುಂಬಿದ್ದ ಕೆರೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೃತಪಟ್ಟಿದ್ದಾಳೆ. ಈ ಹಿಂದೆಯೂ ಸಾಕಷ್ಟು ಮಂದಿ ಕೆರೆ ಮತ್ತು ಜಲಾಶಯಗಳ ನೀರಿಗೆ ಬಲಿಯಾಗಿದ್ದಾರೆ.

ಶ್ರೀನಿವಾಸಸಾಗರ ಜಲಾಶಯದ ಕೋಡಿ ಕಟ್ಟೆ ಆಕರ್ಷಕವಾಗಿದ್ದು, ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಸ್ಥಳೀಯ ಪಂಚಾಯಿತಿ ವತಿಯಿಂದ ಪ್ರವೇಶಕ್ಕೆ ಕಾರಿಗೆ 50 ಹಾಗೂ ಬೈಕ್‌ಗೆ 10 ರೂ. ನಂತೆ ಪ್ರವೇಶ ಶುಲ್ಕ ಪಡೆಯುತ್ತಿದ್ದಾರೆ.

ಆದರೆ, ನೋಡಲು ಬರುವ ಪ್ರವಾಸಿಗರ ಭದ್ರತೆಗೆ ಹೆಚ್ಚಿನ ಕ್ರಮಗಳನ್ನು ಕೈಗೊಂಡಿಲ್ಲ. ಅಪಾಯಕಾರಿ ಸ್ಥಳ ಬಗ್ಗೆ ಕನಿಷ್ಠ ಫಲಕಗಳನ್ನು ಹಾಕಿ ಮಾಹಿತಿ ನೀಡುವ ಕೆಲಸವನ್ನು ಮಾಡಿಲ್ಲ. ಇದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಗುಡಿಬಂಡೆ ಅಮಾನಿಬೈರಸಾಗರ, ಚಿತ್ರಾವತಿ, ಜಕ್ಕಲಮಡಗು ಜಲಾಶಯಗಳು ಕೋಡಿ ಹರಿಯುತ್ತಿದ್ದು, ಇಲ್ಲೂ ಕೂಡಾ ಅಪಾಯಕಾರಿ ಸ್ಥಳಗಳಿವೆ. ಆದರೆ ಯಾವುದೇ ಮುಂಜಾಗ್ರತೆ ಇಲ್ಲದ ಕಾರಣ ಪ್ರವಾಸಿಗರು ಹುಚ್ಚು ಸಾಹಸಕ್ಕಿಳಿದು ಪ್ರಾಣ ತೆಗೆದುಕೊಳ್ಳುತ್ತಿದ್ದಾರೆ.

ಮೋಜು ಮಸ್ತಿಗಾಗಿ ಬರುವ ಯುವಕರು ಇಂತಹ ಹುಚ್ಚಾಟಗಳಿಗೆ ಇಳಿಯುತ್ತಿದ್ದಾರೆ. ಇಂತಹ ಹುಚ್ಚಾಟಗಳಿಗೆ ಬ್ರೇಕ್‌ ಹಾಕಲು ಬೇಕಾದ ಕನಿಷ್ಠ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಇಲ್ಲಿಗೆ ಪ್ರತಿ ವೀಕೆಂಡ್‌ನಲ್ಲಿ ನೂರಾರು ಪ್ರವಾಸಿಗರು ಬರುತ್ತಾರೆ. ಯುವಕರಂತೂ ತಮಗಿಷ್ಟ ಬಂದಂತೆ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಹಲವು ಅನೈತಿಕ ಚಟುವಟಿಕೆಗಳಿಗೆ ಕಾರಣವಾಗಿದೆ.

ಹೀಗಾಗಿ ಕನಿಷ್ಠ ಪಕ್ಷ ವೀಕೆಂಡ್‌ಗಳಲ್ಲಿಯಾದರೂ ಕೋಡಿ ಹರಿಯುತ್ತಿರುವ ಕೆರೆಗಳ ಬಳಿ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು. ಸೂಚನ ಫಲಕಗಳನ್ನು ಅಳವಡಿಸಬೇಕು ಎಂದು ಸ್ಥಳೀಯರು ಹೇಳಿದ್ದಾರೆ.

ನಂದಿಬೆಟ್ಟ ನೋಡಲು ಕಿ.ಮೀ.ಗಟ್ಟಲೇ ಸಾಲಿನಲ್ಲಿ ನಿಲ್ಲಬೇಕು. ಹೀಗಾಗಿ ತುಂಬಿ ಹರಿಯುವ ಕೆರೆಗಳನ್ನು ನೋಡಲು ಬಂದಿದ್ದೇವೆ.

ಆದರೆ, ನೂರಾರು ಪ್ರವಾಸಿಗರು ಅಪಾಯಕಾರಿಯಾಗಿ ಹರಿಯುತ್ತಿರುವ ನೀರಿನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಕನಿಷ್ಠ ಎಚ್ಚರಿಕೆಯ ಫಲಕಗಳನ್ನು ಹಾಕಿಲ್ಲ ಎಂದು ಪ್ರವಾಸಿಗರು ಆತಂಕ ವ್ಯಕ್ತಪಡಿಸಿದ್ರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button