ರಾಜ್ಯ

ಚಾರ್ಮಡಿಘಾಟ್‌ನಲ್ಲಿ ಭೂಕುಸಿತ ಗೋಕಾಕ್ ಜಲಾವೃತ

ರಾಜ್ಯದ ಹವೆಡೆ ವರುಣನ ಆರ್ಭಟ ಮುಂದುವರೆದಿದ್ದು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಚಾರ್ಮಡಿ ಘಾಟ್‌ನಲ್ಲಿ ಭೂಕುಸಿತ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ.ಕರಾವಳಿ, ಉತ್ತರ ಒಳನಾಡು ಪ್ರದೇಶಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದ್ದು, ಮಲೆನಾಡು ಜಿಲ್ಲೆಗಳಲ್ಲಿ ಮಳೆ ತೀವ್ರತೆ ಹೆಚ್ಚಾಗುತ್ತಿರುವುದಕ್ಕೆ ಸ್ಥಳೀಯರು ಅತಂಕಕ್ಕೆ ಒಳಗಾಗಿದ್ದಾರೆ.

ಚಾರ್ಮಡಿಘಾಟ್‌ನ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪ ಬಿದುರುತಳ ಬಳಿ ಭೂಕುಸಿತ ಉಂಟಾಗಿದೆ.ಪಶ್ಚಿಮಘಟ್ಟ ಭಾಗಗಳಲ್ಲಿ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು ತುಂಬಿ ಹರಿಯುತ್ತಿವೆ. ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ನದಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ ಗೋಕಾಕ್ ನಗರದ ಕೆಲವು ಭಾಗಗಳು ಮುಳುಗಡೆ ಭೀತಿಗೆ ಸಿಲುಕಿವೆ.

ಕಲಬುರಗಿ, ಬೀದರ್, ವಿಜಯಪುರ ಜಿಲ್ಲೆಗಳಲ್ಲಿ ನಿರಂತರ ಮಳೆಯ ಜತೆಗೆ ರಭಸವಾಗಿ ಗಾಳಿ ಬೀಸುತ್ತಿದ್ದು, ಚಳಿ ಪ್ರಮಾಣವೂ ಏರಿಕೆಯಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಚಳಿ ಹೆಚ್ಚಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲೂ ಚಳಿ ಅನುಭವವಾಗುತ್ತಿದೆ.ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಗಾಳಿ-ಮಳೆ ಸುರಿಯುತ್ತಿದ್ದು, ಹೊನ್ನಾವರ ತಾಲ್ಲೂಕಿನ ಚಿಕ್ಕನಗೋಡದಲ್ಲಿ ಮನೆ ಮತ್ತು ತೋಟಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ.

ಮುನ್ನೆಚ್ಚೆರಿಕೆ ಕ್ರಮವಾಗಿ ೨೦ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಡಕಲ್ ಜಲಾಶಯದಿಂದ ೨೬ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.ಮಾರ್ಕಂಡೇಯ ನದಿ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದಾಗಿ ಗೋಕಾಕ್ ನಗರದ ಮಾಂಸ ಮಾರುಕಟ್ಟೆ ಸೇರಿದಂತೆ ಹಲವು ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ.

ಇದರಿಂದಾಗಿ ನಾಗರಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.ಧಾರಾಕಾರ ಮಳೆಯಿಂದಾಗಿ ಉತ್ತರ ಕನ್ನಡ, ಕರಾವಳಿ ಭಾಗದಲ್ಲಿ ಮೀನುಗಾರಿಕೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದಾಗಿ ಮೀನುಗಾರಿಕೆಯನ್ನೇ ನಂಬಿಕೊಂಡಿದ್ದವರಿಗೆ ಭಾರಿ ಪ್ರಮಾಣದ ನಷ್ಟವುಂಟಾಗಿದೆ.

ಹೊರ ರಾಜ್ಯದ ಮೀನುಗಾರಿಕಾ ದೋಣಿಗಳು ಕಾರವಾರ ಬಂದರಿನಲ್ಲಿ ಲಂಗರು ಹಾಕಿ ನಿಂತಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button