
ಚಾಮರಾಜನಗರ: ಗಣಪತಿ ವಿಸರ್ಜನೆ ವೇಳೆ ಡಿಜೆ ಆಫ್ ಮಾಡಿ ಎಂದು ಹೇಳಿದ್ದಕ್ಕೆ ಪೊಲೀಸರ ಮೇಲೆ ಕಲ್ಲೆಸೆದಿರುವ ಘಟನೆ ಭಾನುವಾರ (ಸೆಪ್ಟೆಂಬರ್ 18) ತಡರಾತ್ರಿ ಚಾಮರಾಜನಗರ ಜಿಲ್ಲೆ, ಸಂತೇಮರಹಳ್ಳಿ ವೃತ್ತದ ಬಳಿ ನಡೆದಿದೆ. ಘಟನೆಯಲ್ಲಿ ಪಿಎಸ್ಐ ಮಹಾದೇವ್ ಎಂಬವವರ ತಲೆಗೆ ತೀವ್ರ ಪೆಟ್ಟಾಗಿದೆ.
ಸಂತೇಮರಹಳ್ಳಿ ವೃತ್ತದ ಸಮೀಪ ಸ್ಥಾಪಿಸಲಾಗಿದ್ದ ಗಣಪತಿಯನ್ನು ವಿಸರ್ಜನೆ ಮಾಡುವ ವೇಳೆ ರಾತ್ರಿ 11 ಗಂಟೆ ಆದರೂ ಜೋರಾಗಿ ಡಿಜೆ ಹಾಕಿ ನೃತ್ಯ ಮಾಡಲಾಗುತ್ತಿತ್ತು.
ಈ ವೇಳೆ ಸಮಯ ರಾತ್ರಿ 11 ಗಂಟೆ ಆಗಿದೆ, ಜೋರಾಗಿ ಡಿಜೆ ಹಾಕುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಹಾಗಾಗಿ ಡಿಜೆ ಆಫ್ ಮಾಡಿ ಎಂದು ಪೊಲೀಸರು ಬುದ್ದಿಮಾತು ಹೇಳಿದ್ದಾರೆ.
ಪೊಲೀಸರ ಮಾತಿಗೆ ಕುಪಿತಗೊಂಡ ಕೆಲ ಕಿಡಿಗೇಡಿಗಳು ಅವರ ಮೇಲೆ ಕಲ್ಲು ತೂರಿ ದುಷ್ಕೃತ್ಯ ಮೆರೆದಿದ್ದಾರೆ. ಮಹೇಂದ್ರ, ನಾಗೇಶ, ಮಹೇಶ್, ಮುರುಗೇಶ್ ಸೇರಿದಂತೆ 15ಕ್ಕೂ ಹೆಚ್ಚು ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಘಟನೆಯಲ್ಲಿ ಪಿಎಸ್ಐ ಮಹಾದೇವ್ ಎಂಬುವವರಿಗೆ ತಲೆಯ ಭಾಗದಲ್ಲಿ ತೀವ್ರತರ ಗಾಯಗಳಾಗಿದ್ದರೇ ಎಎಸ್ಐ ಶಿವಶಂಕರ್, ಚಾಲಕ ಬಸವರಾಜು ಎಂಬವವರ ಕೈ-ಕಾಲುಗಳಿಗೆ ಗಾಯಗಳಾಗಿವೆ.
ಘಟನೆ ಸಂಬಂಧ ಎಎಸ್ಐ ಶಿವಶಂಕರ್ ದೂರು ಕೊಟ್ಟಿದ್ದು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.