ಚಾಕುವಿನಿಂದ ಇರಿದು ಕಾರ್ಪೆಂಟರ್ ಕೊಲೆ

ಬೈಕ್‍ನಲ್ಲಿ ಹೋಗುತ್ತಿದ್ದ ಕಾರ್ಪೆಂಟರ್ ಒಬ್ಬನನ್ನು ದಾರಿ ಮಧ್ಯೆ ಛೇಡಿಸಿದ ಹುಡುಗರು ಆತನೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸಂಪಿಗೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಬಸವಲಿಂಗಪ್ಪ ನಗರದ ನಿವಾಸಿ ಸಲ್ಮಾನ್(20) ಕೊಲೆಯಾದ ಯುವಕ. ಈತ ವೃತ್ತಿಯಲ್ಲಿ ಕಾರ್ಪೆಂಟರ್.
ನಿನ್ನೆ ರಾತ್ರಿ 9.30ರ ಸುಮಾರಿನಲ್ಲಿ ಫರ್ನಿಚರ್ ಅಂಗಡಿಯಿಂದ ಬೈಕ್ ಸರ್ವೀಸ್ ಮಾಡಿಸಲು ಸಲ್ಮಾನ್ ಹೋಗುತ್ತಿದ್ದಾಗ ಹೆಗಡೆ ನಗರದ 15ನೇ ಕ್ರಾಸ್ ಬಳಿ ರಸ್ತೆ ಬಳಿ ನಿಂತಿದ್ದ ಇಬ್ಬರು ಯುವಕರು ಸಲ್ಮಾನ್‍ನನ್ನು ನೋಡಿ ಬೈದಿದ್ದಾರೆ.
ಇದನ್ನು ಗಮನಿಸಿದ ಸಲ್ಮಾನ್ ಬೈಕ್ ನಿಲ್ಲಿಸಿ ಹುಡುಗರ ಬಳಿ ಬಂದು ಏಕೆ ನನ್ನನ್ನು ಬೈಯುತ್ತಿದ್ದೀರಾ ಎಂದು ಕೇಳುತ್ತಿದ್ದಂತೆ ಏಕಾಏಕಿ ಆತನೊಂದಿಗೆ ಜಗಳವಾಡಿದ್ದಾರೆ. ಮಾತಿಗೆ ಮಾತು ಬೆಳೆದಾಗ ಇಬ್ಬರು ಹುಡುಗರ ಪೈಕಿ ಒಬ್ಬಾತ ಚಾಕುವಿನಿಂದ ಸಲ್ಮಾನ್ ಹೊಟ್ಟೆಗೆ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಗಂಭೀರ ಗಾಯಗೊಂಡ ಸಲ್ಮಾನ್‍ನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.ಸುದ್ದಿ ತಿಳಿದು ಸಂಪಿಗೆ ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿಗಳನ್ನು ಪೊಲೀಸರು ಪರಿಶೀಲಿಸಿ ಆರೋಪಿಗಳ ಬಂಧನಕ್ಕೆ ಶೋಧ ಕೈಗೊಂಡಿದ್ದಾರೆ. ಹಳೆ ದ್ವೇಷದಿಂದ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯು ಈ ಹುಡುಗರು ಹಾಗೂ ಸಲ್ಮಾನ್ ನಡುವೆ ಗಲಾಟೆ ನಡೆದಿತ್ತು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.