ಅಂತಾರಾಷ್ಟ್ರೀಯ

ಚಳಿಗಾಲದ ಚಂಡಮಾರುತಕ್ಕೆ ಅಮೆರಿಕ ತತ್ತರ, 18 ಮಂದಿ ಸಾವು

ಚಳಿಗಾಲದ ಚಂಡಮಾರುತಕ್ಕೆ ಅಮೆರಿಕ ತತ್ತರಗೊಂಡಿದೆ. ಕ್ರಿಸ್‍ಮಸ್ ಮತ್ತು ಹೊಸವರ್ಷದ ಆಚರಣೆಗೆ ಭಾರೀ ಹಿಮದ ಗಾಳಿ ಅಡ್ಡಿಯಾಗಿದ್ದು, ಹಿಮಪಾತ, ಬಿರುಗಾಳಿ, ಮಳೆ ಹಾಗೂ ತೀವ್ರ ಚಳಿಯಿಂದ ಈವರೆಗೆ 18 ಮಂದಿ ಸಾವನ್ನಪ್ಪಿದ್ದಾರೆ.ಹಲವೆಡೆ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಮತ್ತೊಂದು ಆತಂಕ ಎದುರಾಗಿದೆ. ಚಳಿಯ ಚಂಡಮಾರುತ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಬಾಂಬ್ ಸೈಕ್ಲೋನ್ ಎನ್ನುವ ಚಳಿಗಾಲದ ಈ ಚಂಡಮಾರುತ ಅಮೆರಿಕಕ್ಕೆ ಅಪ್ಪಳಿಸಿರುವ ಪರಿಣಾಮ ಕ್ರಿಸ್‍ಮಸ್ ಸಂಭ್ರಮದಲ್ಲಿದ್ದ ಜನರಿಗೆ ಭಾರೀ ಸಮಸ್ಯೆ ಸೃಷ್ಟಿಸಿದೆ. ಸಾವಿರಾರು ಮನೆಗಳು ಹಾನಿಗೊಳಗಾಗಿವೆ.

ವಿದ್ಯುತ್ ಸಂಪರ್ಕ ಕಡಿತಗೊಂಡು ಲಕ್ಷಾಂತರ ಮಂದಿ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ.ಚಂಡಮಾರುತಕ್ಕೆ ನ್ಯೂಯಾರ್ಕ್‍ನ ಬಫೆಲೋ ಸಂಪೂರ್ಣ ನಲುಗಿಹೋಗಿದೆ. ಕೊರೆಯುವ ಚಳಿಯಲ್ಲಿ ಜನ ನಡುಗುತ್ತಿದ್ದಾರೆ. ಇದರ ಜತೆ ಬಲವಾದ ಗಾಳಿ ಬೀಸುತ್ತಿರುವುದರಿಂದ ಮರ-ಗಿಡಗಳು ಧರೆಗುರುಳುತ್ತಿವೆ.

ಭಾರೀ ಹಿಮಪಾತದಿಂದ ಜನರಿಗೆ ವೈದ್ಯಕೀಯ ತುರ್ತುಸೇವೆ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.ಬಫೆಲೋ ಪ್ರದೇಶದಲ್ಲಿ ಕನಿಷ್ಠ ಮೂವರು ತೀವ್ರ ಚಳಿಯಿಂದ ಸಾವನ್ನಪ್ಪಿದ್ದಾರೆ. ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.

ನಯಾಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಾಳೆ ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇಲ್ಲಿನ ಪ್ರತಿಯೊಂದು ಅಗ್ನಿಶಾಮಕ ಟ್ರಕ್‍ಗಳು ಹಿಮದಲ್ಲಿ ಸಿಲುಕಿಕೊಂಡಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಎಷ್ಟೇ ತುರ್ತು ವಾಹನಗಳನ್ನು ಹೊಂದಿದ್ದರೂ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಭಾರೀ ಪ್ರಮಾಣದ ಹಿಮಪಾತವಾಗುತ್ತಿರುವುದು ಅಲ್ಲದೆ ಗಾಳಿ ಕೂಡ ಬೀಸುತ್ತಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ನಿವಾಸಿಗಳು ಮನೆಗಳಿಂದ ಹೊರಬರಲಾಗದೆ ಪರದಾಡುವಂತಾಗಿದೆ ಎಂದು ನ್ಯೂಯಾರ್ಕ್ ಗೌರ್ನರ್ ಕ್ಯಾತಿ ಓಚಲ್ ತಿಳಿಸಿದ್ದಾರೆ.ಘನೀಕರಿಸುವ ಮಳೆ ಮತ್ತು ಚಳಿಯಿಂದಾಗಿ ಮೈನಿಯಿಂದ ಸಿಯಾಟಲ್‍ಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಪೂರ್ವ ಯುಎಸ್‍ನಾದ್ಯಂತ ಸೇವೆ ಸಲ್ಲಿಸುತ್ತಿರುವ ವಿದ್ಯುತ್ ಗ್ರಿಡ್ ಆಪರೇಟರ್ ಸೇರಿ 65 ಮಿಲಿಯನ್ ಜನರಿಗೆ ರೋಲಿಂಗ್ ಬ್ಲಾಕ್ ಕೌಟ್ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ.ಉತ್ತರ ಕೆರೊಲಿನಾದಲ್ಲಿ 1,69,000 ಗ್ರಾಹಕರು ವಿದ್ಯುತ್ ಇಲ್ಲದೆ ಪರದಾಡಿದ್ದಾರೆ.

ಬಫೆಲೋ ಉಪನಗರ ಚಿಕಾಗೋದಲ್ಲಿ ವೈದ್ಯಕೀಯ ತುರ್ತು ಚಿಕಿತ್ಸೆ ನೀಡಲು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಾಗದೆ ತಮ್ಮ ಮನೆಗಳಲ್ಲೇ ಇದ್ದರೂ ಸಾವನ್ನಪ್ಪಿದ್ದಾರೆ.ಇತಿಹಾಸದಲ್ಲೇ ಇದು ಅತ್ಯಂತ ಕೆಟ್ಟ ಚಂಡಮಾರುತವಾಗಿದೆ ಎಂದು ಅಲ್ಲಿನ ಜನ ಹೇಳಿದ್ದಾರೆ.

ದೇಶದ ರಸ್ತೆಗಳು ಹಾಗೂ ರಸ್ತೆಪಕ್ಕ ನಿಲ್ಲಿಸಿರುವ ವಾಹನಗಳೆಲ್ಲ ಮಂಜಿನಲ್ಲಿ ಸಂಪೂರ್ಣವಾಗಿ ಮುಚ್ಚಿಹೋಗಿವೆ. ವಾಷಿಂಗ್ಟನ್‍ನಿಂದ ಫ್ಲೋರಿಡಾವರೆಗೆ ಹಲವು ರಾಜ್ಯಗಳವರೆಗೆ ತೀವ್ರ ಚಳಿ, ಚಂಡಮಾರುತ, ಹಿಮಪಾತ ಹಾಗೂ ಚಳಿಗಾಲದ ಎಚ್ಚರಿಕೆ ನೀಡಲಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button