
ಬೆಂಗಳೂರು: ಕೋಲಾರದಿಂದ ನಾನು ಸ್ಪರ್ಧೆ ಮಾಡುವುದಿಲ್ಲ. ಚನ್ನಪಟ್ಟಣದಲ್ಲಿಯೇ ಸ್ಪರ್ಧೆ ಮಾಡುತ್ತೇನೆ ಎಂದು ಈಗಾಗಲೇ ಹೇಳಿದ್ದೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಇಂದು ಕರೆದಿರುವ ವೀರಶೈವ ಲಿಂಗಾಯತ ಮುಖಂಡರ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು ಅವರು.
ಕಾರ್ಯಕರ್ತರು ನನ್ನ ಮೇಲಿನ ಅಭಿಮಾನದಿಂದ ಕೋಲಾರದಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ದಾರೆ. ಅಲ್ಲಿನ ಜನರ ಸಮಸ್ಯೆ ಏನಿದೆ ಅಂತ ನನಗೆ ಗೊತ್ತಿದೆ. ಕೋಲಾರದಲ್ಲಿ ನಮ್ಮ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳು ಇದ್ದಾರೆ.
ಕೆಜಿಎಫ್ ಬಿಟ್ಟು ಉಳಿದ ಕಡೆ ನಮ್ಮ ಶಾಸಕರು ಇದ್ದಾರೆ. ನಾನೇ ಹೋಗಿ ಸ್ಪರ್ಧೆ ಮಾಡಬೇಕು ಅಂತ ಇಲ್ಲ. ಎಲ್ಲಾ ಮುಖಂಡರ ಜತೆ ಚರ್ಚೆ ಮಾಡಿ ಸಮಸ್ಯೆ ಪರಿಹಾರ ಮಾಡುತ್ತೇನೆ ಎಂದು ಹೇಳಿದರು.
ನವೆಂಬರ್ 1ರಂದು ಜೆಡಿಎಸ್ ಪಟ್ಟಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ಮಾತನಾಡಿದ ಹೆಚ್ ಡಿಕೆ, ನಾವು ಎಲ್ಲರಿಗಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ. ಬೇರೆ ಪಕ್ಷಗಳಲ್ಲಿ ಅನೇಕ ಪಟ್ಟಿಗಳಿವೆ. ಅವುಗಳ ಪಾಲಿಗೆ ಪಟ್ಟಿಗಳೇ ಫಜೀತಿ ಆಗಲಿವೆ.
ಈಗಾಗಲೇ 123 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದು, ಅವರಿಗೆಲ್ಲ ಕೆಲಸ ಪ್ರಾರಂಭ ಮಾಡಲು ಹೇಳಿದ್ದೇನೆ. ನಾವು ಯಾವುದೇ ಪ್ರಚಾರ ಮಾಡದೇ ಕೆಲಸ ಪ್ರಾರಂಭ ಮಾಡಿದ್ದೇವೆ ಎಂದರು.
ಬೇರೆ ಪಕ್ಷಗಳು ಬೇರೆ ಬೇರೆ ರಾಜ್ಯದಿಂದ ನಾಯಕರನ್ನು ಕರೆದುಕೊಂಡು ಬಂದು ಕಾರ್ಯತಂತ್ರ ಮಾಡುತ್ತಿದ್ದಾರೆ. ನಾವು ಕೂಡ 3-4 ತಂಡದಲ್ಲಿ ಕಾರ್ಯತಂತ್ರ ಮಾಡ್ತಿದ್ದೇವೆ.
ಚುನಾವಣೆಗಾಗಿಯೇ ವಾರ್ ರೂಂ ಕೂಡಾ ತೆರೆಯಲು ಉದ್ದೇಶಿಸಲಾಗಿದೆ. ನಾವು ಎಲ್ಲಾ ಪಕ್ಷಗಳಂತೆ ಸ್ಟ್ರಾಟರ್ಜಿ ಮಾಡುತ್ತಿದ್ದೇವೆ ಎಂದು ಹೇಳಿದರು.