
ಜ್ಞಾನಪೀಠ ಪ್ರಶಸ್ತಿ ವಿಜೇತ ಹಾಗೂ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಹೆಸರಿನಲ್ಲಿ ಸೈಬರ್ ಖದೀಮರು ವಂಚನೆ ಯತ್ನ ಸಂಬಂಧ ನಗರದ ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಯತ್ನ ಸಂಬಂಧ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಕಂಬಾರ, ನನ್ನ ಹೆಸರಿನಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ವಾಟ್ಸ್ಯಾಪ್ ಸಂದೇಶ ಕಳಿಸುತ್ತಿರುವ ಕಿಡಿಗೇಡಿಗಳು ಧನ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆದ್ದರಿಂದ ತಮ್ಮ ಹೆಸರು ದುರುಪಯೋಗವಾಗದಂತೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ.
ಚಂಡಿಗಡ, ಕೋಲ್ಕತ್ತಾ ದಲ್ಲಿ ನನ್ನ ಸ್ನೇಹಿತರೊಬ್ಬರಿಗೆ ವಾಟ್ಸಾಪ್ ಮೂಲಕ ಮಸೇಜ್ ಮಾಡಿದ್ದಾರೆ. ನಾನು ತೊಂದರೆಯಲ್ಲಿದ್ದೇನೆ, ಹಣದ ಸಹಾಯಬೇಕಿದೆ ಅಂದಿದ್ದಾರೆ. ಅವರ ಸ್ನೇಹಿತ ನನಗೆ ಕಾಲ್ ಮಾಡಿ ಈ ವಿಚಾರ ತಿಳಿಸಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ಈ ಹಿಂದೆ ಕೂಡ ಇದೇ ರೀತಿ ಈ ಈ-ಮೇಲ್ ಗಳ ಮೂಲಕ ಹಣ ಕೇಳಿದ್ದರು. ಕೆಲ ಕಿಡಿಗೇಡಿಗಳು ನನ್ನ ಹೆಸರನ್ನು ಬಳಸಿಕೊಂಡು ಈ ರೀತಿ ಮಾಡ್ತಿದ್ದಾರೆ. ನಾನು ಆರೋಗ್ಯವಾಗಿದ್ದೇನೆ ಎಂದು ಚಂದ್ರಶೇಖರ ಕಂಬಾರ ಸ್ಟಷ್ಟನೆ ನೀಡಿದ್ದಾರೆ.
ಕವಿ, ಸಾಹಿತಿಯಾಗಿರುವ ಚಂದ್ರಶೇಖರ ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದವರು. ಅವರ ಸಮಗ್ರ ಸಾಹಿತ್ಯ ಕೃತಿಗೆ 2010ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.