ಗೋವಾದಿಂದ ಮಾದಕವಸ್ತು ತಂದು ಮಾರಾಟ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ಅರೆಸ್ಟ್

ಗೋವಾದಿಂದ ಮಾದಕವಸ್ತುಗಳನ್ನು ಖರೀದಿಸಿಕೊಂಡು ಬಂದು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಐಟಿಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಡ್ರಗ್ ಪೆಡ್ಲರ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಅಗ್ಬು ಚಿಕೆ ಅಂಥೋನಿ ಬಂಧಿತ ಡ್ರಗ್ ಪೆಡ್ಲರ್.
ಈತನಿಂದ 25 ಲಕ್ಷ ಬೆಲೆ ಬಾಳುವ 250 ಗ್ರಾಂ ಎಂಡಿಎಂಎ ಕ್ರಿಸ್ಟಲ್, ಮೊಬೈಲ್, ತೂಕದ ಯಂತ್ರ ಹಾಗೂ 700 ರೂ. ವಶಪಡಿಸಿಕೊಳ್ಳಲಾಗಿದೆ.ನೈಜೀರಿಯಾ ದೇಶದವನಾದ ಈ ಆರೋಪಿಯು ನಾಲ್ಕು ವರ್ಷಗಳ ಹಿಂದೆ ಬಿಸ್ನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸುವ ದುರದ್ದೇಶದಿಂದ ಗೋವಾ ರಾಜ್ಯದಲ್ಲಿ ನೆಲೆಸಿರುವ ಆಫ್ರಿಕಾ ಮೂಲದ ಪರಿಚಯಸ್ಥ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕವಸ್ತುಗಳನ್ನು ಖರೀದಿ ಮಾಡಿದ್ದಾನೆ.
ಒಂದು ಗ್ರಾಂಗೆ 10 ಸಾವಿರದಿಂದ 12 ಸಾವಿರ ರೂ.ಗಳಂತೆ ಹೆಚ್ಚಿನ ಬೆಲೆಗೆ ನಗರದ ಕಾಲೇಜು ವಿದ್ಯಾರ್ಥಿಗಳಿಗೆ, ಐಟಿಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
ಮಾದಕವಸ್ತುಗಳ ಮಾರಾಟ ಮತ್ತು ಸಾಗಾಟ ಮಾಡಿರುವ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿ ವಿಚಾರಣಾ ಹಂತದಲ್ಲಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.ಆರೋಪಿ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರು, ಉಪಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಪರಾಧ ದಳ(ಪಶ್ಚಿಮ) ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಯಶಸ್ವಿಯಾಗಿ ಕೈಗೊಂಡಿದೆ.