ಗೆಲುವಿಗಾಗಿ ನಡ್ಡಾ ದಂಡಯಾತ್ರೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ರಣಕಹಳೆ ಮೊಳಗಿಸಿದ ಬೆನ್ನಲ್ಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಎರಡು ದಿನಗಳ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಪಕ್ಷದ ಸಭೆಗಳಲ್ಲಿ ಭಾಗಿಯಾಗುವ ಜತೆಗೆ ವಿವಿಧ ಮಠಗಳಿಗೂ ಭೇಟಿ ನೀಡಲಿದ್ದಾರೆ.
ಜೆ.ಪಿ. ನಡ್ಡಾ ಅವರ ಈ ರಾಜ್ಯ ಭೇಟಿಯಿಂದ ಬಿಜೆಪಿಯ ಚುನಾವಣಾ ತಾಲೀಮು ಮತ್ತಷ್ಟು ಚುರುಕು ಪಡೆಯಲಿದೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ವಾರವಷ್ಟೆ ರಾಜ್ಯಕ್ಕೆ ಆಗಮಿಸಿ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಗೆಲುವಿಗೆ ರಣತಂತ್ರಗಳನ್ನು ಹೆಣೆಯುವ ಜತೆಗೆ ಆದಿ ಚುಂಚನಗಿರಿ ಮಠಕ್ಕೂ ಭೇಟಿ ನೀಡಿದ್ದರು.
ಜೆ.ಪಿ. ನಡ್ಡಾ ಅವರು ಅಮಿತ್ ಶಾರವರ ಹಾದಿಯಲ್ಲೇ ಸಾಗಿದ್ದು, ಪಕ್ಷದ ಸಭೆ, ಸಮಾವೇಶ, ಮುಖಂಡರ ಜತೆ ಸಮಾಲೋಚನೆ ಜತೆಗೆ ವಿವಿಧ ಸಮುದಾಯಗಳ ಮಠಗಳಿಗೂ ಭೇಟಿ ನೀಡಲಿದ್ದಾರೆ.ನಾಳೆಯಿಂದ ೨ ದಿನ ಮಧ್ಯ ಕರ್ನಾಟಕ ಭಾಗದಲ್ಲಿ ಪಕ್ಷದ ಸಮಾವೇಶಗಳಲ್ಲಿ ಪಾಲ್ಗೊಂಡು ಚುನಾವಣಾ ಸಿದ್ಧತೆಗೆ ಚುರುಕು ನೀಡುವರು.
ನಾಳೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುವ ಜೆ.ಪಿ. ನಡ್ಡಾ ಅವರು, ತುಮಕೂರು ಮತ್ತು ಮಧುಗಿರಿಯಲ್ಲಿ ನಡೆಯುವ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಭಾಗಿಯಾಗುವರು. ಬಳಿಕ ತುಮಕೂರಿನ ಸಿದ್ದಗಂಗಾಮಠಕ್ಕೂ ಭೇಟಿ ನೀಡುವರು.ಸಂಜೆ ಚಿತ್ರದುರ್ಗದಲ್ಲಿ ನಾಳೆ ನಡೆಯುವ ಬಿಜೆಪಿಯ ಎಸ್‌ಸಿ/ಎಸ್‌ಟಿ ಓಬಿಸಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಚಿತ್ರದುರ್ಗದ ಮಾದಾರ ಸಮುದಾಯದ ಮಠಕ್ಕೆ ಭೇಟಿ ನೀಡಿ ನಂತರ ಸಿರಿಗೆರೆಯ ತರಳಬಾಳು ಮಠಕ್ಕೂ ಭೇಟಿ ನೀಡುವರು.
ಜ. ೫ ರ ರಾತ್ರಿ ದಾವಣಗೆರೆಯಲ್ಲಿ ವಾಸ್ತವ್ಯ ಹೂಡುವ ಜೆ.ಪಿ. ನಡ್ಡಾ ಅವರು ಅದೇ ದಿನ ರಾತ್ರಿ ದಾವಣಗೆರೆ ವಿಭಾಗದ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖ ಮುಖಂಡರುಗಳ ಸಭೆ ನಡೆಸಿ ಚುನಾವಣಾ ತಯಾರಿ, ಗೆಲುವಿನ ರಣತಂತ್ರಗಳ ಬಗ್ಗೆ ಚರ್ಚೆ ನಡೆಸುವರು.
ಜ. ೬ ರಂದು ಬೆಳಿಗ್ಗೆ ಹರಿಹರದ ಪಂಚಮಸಾಲಿ ಮಠ, ಬೆಳ್ಳುಡಿಯ ಕನಕಗುರು ಪೀಠ, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿ ದಾವಣಗೆರೆ ದಕ್ಷಿಣ ಕ್ಷೇತ್ರದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಅಂದು ಸಂಜೆ ತುಮಕೂರಿನ ಶಿರಾದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಭೆಯಲ್ಲೂ ಭಾಗಿಯಾಗುವರು.ಅರುಣ್‌ಸಿಂಗ್, ಸಿಎಂ ಎಲ್ಲರೂ ಭಾಗಿಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಎಲ್ಲ ಕಾರ್ಯಕ್ರಮಗಳಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಸಹ ಭಾಗಿಯಾಗಲಿದ್ದು, ಅರುಣ್‌ಸಿಂಗ್ ಇಂದು ಸಂಜೆಯೇ ಬೆಂಗಳೂರಿಗೆ ಆಗಮಿಸುವರು.
ಮೋದಿ ೧೨ ರಂದು ರಾಜ್ಯಕ್ಕೆಮುಂರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡುವೆಯೇ ಈ ತಿಂಗಳ ೧೨ ರಂದು ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುವರು. ಹುಬ್ಬಳ್ಳಿಯಲ್ಲಿ ಈ ತಿಂಗಳ ೧೨ ರಂದು ನಡೆಯಲಿರುವ ಜನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗುವರು. ಇದಾದ ನಂತರ ಅಮಿತ್ ಶಾ ಮತ್ತೆ ಈ ತಿಂಗಲ ೧೪ ಮತ್ತು ೧೫ ರಂದು ರಾಜ್ಯಕ್ಕೆ ಭೇಟಿ ನೀಡುವರು.